

ಕೆಂಭಾವಿ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಎರಡೂ ಪಕ್ಷಗಳು ತೆರೆಮರೆಯ ಕÀಸರತ್ತು ಜೋರಾಗಿದೆ. ಚುನಾವಣಾಧಿಕಾರಿಯಾಗಿರುವ ಸುರಪುರ ತಹಸೀಲ್ದಾರ್ ಕೆ.ವಿಜಯಕುಮಾರ ಸೋಮವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಸೆ.೩ರಂದು ಮಂಗಳವಾರ ಪುರಪಿತೃಗಳ ಅಧಿಕಾರ ಗದ್ದುಗೆ ಹಿಡಿಯುವ ಮುಹೂರ್ತ ಫಿಕ್ಸ್ ಆಗಿದೆ.
ಇದೇ ತಿಂಗಳ ಮೊದಲ ವಾರ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿತ್ತು. ನಂತರ ಜಿಲ್ಲಾಧಿಕಾರಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಚುನಾವಣೆ ನಡೆಸುವಂತೆ ಸೂಚನೆ ನೀಡಿ ಅಧಿಕೃತ ಆದೇಶ ಹೊರಡಿಸಿದ್ದರು.
ಮ್ಯಾಜಿಕ್ ನಂಬರ್‌ನ ಗಡಿದಾಟಿದ ಬಿಜೆಪಿ ಪಾಳಯದಲ್ಲಿ ಗದ್ದುಗೆಗಾಗಿ ಮುಸುಕಿನ ಗುದ್ದಾಟ ನಡೆಸುತ್ತಿರುವ ಬಗ್ಗೆ ಗುಸು-ಗುಸು ಮತು ಹಬ್ಬಿದ್ದು ಇದನ್ನೇ ಲಾಭ ಮಾಡಿಕೊಂಡಿರುವ ಕಾಂಗ್ರೆಸ್-ಬಿಜೆಪಿಯ ಕೆಲ ಸದಸ್ಯರನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆಯಲ್ಲಿ ತೊಡಗಿದೆ.
ಆದರೆ ೧೩ ಸ್ಥಾನಗಳಿಂದ ಸ್ಪಷ್ಟ ಬಹುಮತದೊಂದಿಗೆ ಪುರಸಭೆ ಮೆಟ್ಟಿಲು ಏರಿರುವ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಹಾತೊರೆಯುತ್ತಿದೆ. ಸರ್ಕಾರ ನಿಗದಿಪಡಿಸಿದ ಮೀಸಲಾತಿ ಅನ್ವಯ ಈ ಬಾರಿ ಅಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಎ (ಬಿಸಿಎ) ಗೆ ಮೀಸಲಾಗಿದ್ದರೆ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿದೆ. ಗದ್ದುಗೆ ಏರಲು ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದರೂ ಸದಸ್ಯರ ಒಗ್ಗಟ್ಟಿನ ಬಲದ ಕೊರತೆಯಿಂದ ಅಧಿಕಾರ ತಪ್ಪಬಹುದು ಎಂಬ ಮಾತು ಜೋರಾಗಿ ಕೇಳಿ ಬರುತ್ತಿವೆ.
ಸಚಿವ ಶರಣಬಸಪ್ಪ ದರ್ಶನಾಪುರ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ್ ಯಾಳಗಿ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಬಿಜೆಪಿ ಪಕ್ಷದ ಸದಸ್ಯರ ಜತೆ ಅಮೀನರೆಡ್ಡಿ ಯಾಳಗಿ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರ ಜತೆ ಸಚಿವ ಶರಣಬಸಪ್ಪ ದರ್ಶನಾಪುರ ಸರಣಿ ಸಭೆ ನಡೆಸಿದ್ದು, ಅಂತಿಮ ತೀರ್ಮಾನ ಮಾತ್ರ ಇನ್ನೂ ನಿಗೂಢವಾಗಿದೆ.
ಎರಡು ಪಕ್ಷೇತರ ಸದಸ್ಯರ ಬಲ ಮತ್ತು ಸಂಸದ ಶಾಸಕರ ಬಲದಿಂದ ಮ್ಯಾಜಿಕ್ ನಂಬರಿನ ಗಡಿಗೆ ಬಂದು ತಲುಪಿರುವ ಕಾಂಗ್ರೆಸ್ ಪಕ್ಷಕ್ಕೆ ಒಂದು ಸದಸ್ಯರ ಬಲ ಬೇಕಿದ್ದು ಈ ಬಗ್ಗೆ ಕುದುರೆ ವ್ಯಾಪಾರವೂ ಶುರುವಾಗಿದೆ ಎನ್ನಲಾಗಿದೆ. ಒಟ್ಟಾರೆ ಅಂದು ನಡೆಯುವ ಚುನಾವಣೆಗೆ ಈ ಭಾಗದ ಶಾಸಕರೂ ಆಗಿರುವ ಸಚಿವ ಶರಣಬಸಪ್ಪ ದರ್ಶನಾಪೂರ ಮತ್ತು ಸಂಸದ ಜಿ.ಕುಮಾರ ನಾಯಕ ಬರುವುದಂತು ಗ್ಯಾರಂಟಿ. ಒಟ್ಟಾರೆ ಅಂದು ನಡೆಯುವ ಚುನಾವಣೆ ನಂತರವಷ್ಟೇ ಇದಕ್ಕೆ ತಕ್ಕ ಉತ್ತರ ಸಿಗಲಿದೆ.