

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹೊಸ ದಾಖಲೆ ಬರೆದಿದ್ದು, ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮೈಲಿಗಲ್ಲು ಸೃಷ್ಟಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ, ೨೦೨೪-೨೫ರ ಹಣಕಾಸು ವರ್ಷದಲ್ಲಿ ೪೧ ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ೫೦೦,೦೦೦ ಮೆಟ್ರಿಕ್ ಟನ್ ತೂಕದ ಸರಕುಗಳನ್ನು ಸಾಗಿಸಲಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ೩೭.೫೩ ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. ೨೦೨೪-೨೫ರ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿ ೪೧.೮೮ ದಶಲಕ್ಷಕ್ಕೆ ತಲುಪಿದ್ದು, ಶೇ.೧೧.೬ ರಷ್ಟು ಹೆಚ್ಚಳವಾಗಿದೆ. ದೇಶೀಯ ಪ್ರಯಾಣಿಕರ ಸಂಖ್ಯೆಯು ಶೇ.೧೦ರಷ್ಟು ಹೆಚ್ಚಾಗಿದ್ದು ೩೬.೦೫ ದಶಲಕ್ಷ ತಲುಪಿದ್ದರೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯು ಶೇ.೨೫ರಷ್ಟು ಹೆಚ್ಚಳವಾಗಿ, ೫.೮೩ ದಶಲಕ್ಷಕ್ಕೆ ಏರಿಕೆಯಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲು, ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಜಾಗತಿಕ ಜಾಲವನ್ನು ವಿಸ್ತರಿಸಿರುವುದು ಪ್ರಮುಖ ಕಾರಣವಾಗಿದೆ. ಜತೆಗೆ, ಬೆಂಗಳೂರಿನಿಂದ ಲಂಡನ್ ಹೀಥ್ರೂಗೆ ದೈನಂದಿನ ಹೆಚ್ಚುವರಿ ವಿಮಾನ ಹಾರಾಟ, ಕ್ಯಾಥೆ ಪೆಸಿಫಿಕ್, ಕೆಎಲ್ಎಂ, ಜಪಾನ್ ಏರ್‌ಲೈನ್ಸ್, ಕ್ವಾಂಟಾಸ್ ಸೇರಿದಂತೆ ಹಲವು ವಿದೇಶಿ ವಿಮಾನಯಾನ ಸಂಸ್ಥೆಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಒದಗಿಸುವ ವಿಮಾನ ಸೇವೆಯನ್ನು ಇನ್ನಷ್ಟು ಹೆಚ್ಚಿಸಿರುವುದು ಸಹ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ ನಾಲ್ಕು ತಿಂಗಳುಗಳಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ ಸ್ಥಾನ ಪಡೆದುಕೊಂಡಿದೆ. ೭೬ ದೇಶಿಯ ಮತ್ತು ೩೩ ಅಂತಾರಾಷ್ಟ್ರೀಯ ತಾಣಗಳಿಗೆ ಬೆಂಗಳೂರಿನಿಂದ ತಡೆರಹಿತ ವಿಮಾನ ಸೇವೆ ಲಭ್ಯವಿದ್ದು, ಇದೇ ವರ್ಷದ ಮೇ ತಿಂಗಳಿನಿಂದ ವಿಯೆಟ್ನಾಂನ ಹನೋಯಿ ನಗರಕ್ಕೆ ಆರಂಭವಾಗಲಿರುವ ವಿಮಾನ ಸೇವೆಯು ೩೪ನೇ ಅಂತಾರಾಷ್ಟ್ರೀಯ ತಾಣವಾಗಿ ಹೊರಹೊಮ್ಮಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಹೇಳಿದ್ದಾರೆ.