

ಅಶೋಕ ಶೆಟ್ಟರ, ಬಾಗಲಕೋಟೆ: ಎದುರಾದ ಎಲ್ಲ ಸಂಕಷ್ಟಗಳನ್ನು ಮೆಟ್ಟಿನಿಂತು ಅನ್ನದಾತ ತನ್ನ ನೆಚ್ಚಿನ ಕೆಂಪು ಸುಂದರಿಯನ್ನು ಬೆಳೆಸಿ ನಿಲ್ಲಿಸಿದ್ದಾನೆ. ಆದರೆ, ಬೆಳೆದು ನಿಂತಿರುವ ಕೆಂಪು ಸುಂದರಿಗೆ ಒಳ್ಳೆಯ ಬೇಡಿಕೆ ಬಂದಿದ್ದೆ ಬಂತು ಕಳ್ಳಕಾಕರ ವಕ್ರದೃಷ್ಟಿ ಬಿದ್ದಿದ್ದು, ಪೋಷಕರಿಗೆ ತೀವ್ರ ಸಂಕಷ್ಟ ಬಂದೇರೆಗಿದೆ.!
ಹೌದು, ಭೀಕರ ಬರ, ಮಳೆ ಇಲ್ಲ, ಬೆಳೆ ಬರುತ್ತಿಲ್ಲ ಎನ್ನುವ ರೈತರ ಸಂಕಷ್ಟದ ನಡುವೆಯೂ ಬಾಗಲಕೋಟೆ ಜಿಲ್ಲೆಯಲ್ಲಿ ಅನೇಕ ರೈತರು ಟ್ಯಾಂಕರ್ಮೂಲಕ ಸಾವಿರಾರು ಖರ್ಚು ಮಾಡಿ ಕೆಂಪು ಮೆಣಸಿನಕಾಯಿ ಬೆಳೆದಿದ್ದಾರೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆಯೂ ಸಿಗುತ್ತಿದೆ. ಅಧಿಕ ಬೆಲೆ ಸಿಗುತ್ತಿರುವುದೇ ಇದೀಗ ರೈತರಿಗೆ ಸಂಕಷ್ಟ ಎದುರಾಗಲು ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ೪೦, ೫೦ ಸಾವಿರ ರೂ. ಬೆಲೆ ಸಿಗುತ್ತಿರುವುದರಿಂದ ದುಷ್ಟರು ರಾತ್ರೋ ರಾತ್ರಿ ಹೊಲಗಳಿಗೆ ನುಗ್ಗಿ ಮೆಣಸಿನಕಾಯಿ ಕಳವು ಮಾಡಿಕೊಂಡು ಹೋಗುತ್ತಿದ್ದಾರೆ. ಕಳ್ಳತನ ದಿನೇ ದಿನೇ ಹೆಚ್ಚುತ್ತಿರುವುದು ಮೆಣಸಿನಕಾಯಿ ಬೆಳೆದಿರುವ ರೈತರಿಗೆ ನಿದ್ದೆಗೆಡಿಸಿ, ರಾತ್ರಿ ಜಾಗರಣೆ ಮಾಡುವಂತೆ ಮಾಡಿದೆ.
ವಿವಿಧ ಆಹಾರ ಧಾನ್ಯಗಳು, ತರಕಾರಿಗಳ ಬೆಲೆ ಹಾವು ಏಣಿ ಆಟದಿಂದಾಗಿ ಒಮ್ಮೆ ಲಾಭ ಮತ್ತೊಮ್ಮೆ ನಷ್ಟ ಎನ್ನುವ ಪರಿಸ್ಥಿತಿ ಇದೆ. ಆದರೆ, ಕಳೆದ ಮೂರು ವರ್ಷಗಳಿಂದ ಮೆಣಸಿನಕಾಯಿ ಬೆಲೆ ಮಾತ್ರ ಸ್ಥಿರವಾಗಿದ್ದಲ್ಲದೇ ವರ್ಷದಿಂದ ವರ್ಷಕ್ಕೆ ಬೆಲೆ ಹೆಚ್ಚಳ ಆಗುತ್ತಿದೆ.
ಮುಖ್ಯವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ಸಲ ೧೦, ೧೨ ಸಾವಿರ ಹೆಕ್ಟರ್ಪ್ರದೇಶದಲ್ಲಿ ಬಿತ್ತನೆ ಆಗುತ್ತಿದ್ದ ಮೆಣಸಿನಕಾಯಿ ಪ್ರಸಕ್ತ ವರ್ಷ ೨೨ ಹೆಕ್ಟರ್ಪ್ರದೇಶದಲ್ಲಿ ಬಿತ್ತನೆ ಆಗಿದೆ. ಮಳೆ ಕೈಕೊಟ್ಟಿದ್ದರಿಂದ ಬೆಳೆ ರಕ್ಷಣೆ ಮಾಡಲು ರೈತರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯಾಂಕರ್ಮೂಲಕ ನೀರು ತಂದು ಬೆಳೆ ಬೆಳೆಸಿದ್ದಾರೆ. ಇದೀಗ ಬೆಳೆ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೆಲೆಯೂ ಇದೆ. ಆದರೆ, ಜಮೀನಿನಲ್ಲಿ ಕಳ್ಳರು ನುಗ್ಗಿ ಬೆಳೆಯನ್ನು ದೋಚಿಕೊಂಡು ಹೋಗುತ್ತಿರುವುದು ರೈತರ ನಿದ್ದೆಗೆಡೆಸಿದೆ.
ಮೆಣಸಿನಕಾಯಿ ಸಂರಕ್ಷಣೆ ಮಾಡಿಕೊಳ್ಳಲು ಅನೇಕ ಬೆಳೆಗಾರರು ರಾತ್ರಿ ಹೊಲದಲ್ಲಿ ಮಲಗುತ್ತಿದ್ದಾರೆ. ಆದರೆ, ಈ ಬದಿಯಲ್ಲಿ ಅವರು ಇದ್ದಾಗ ಮತ್ತೊಂದು ಬದಿಯಲ್ಲಿ ರಾತ್ರಿ ವೇಳೆ ಪಟಪಟನೆ ಕಾಯಿ ಬಿಡಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ರೈತರು ದಿಕ್ಕು ತೋಚದಂತೆ ಆಗಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶದ ಹೊರವಲಯದಲ್ಲಿ ಪೊಲೀಸ್ಗಸ್ತು ಚುರುಕುಗೊಳಿಸಿ, ಹಳ್ಳಿಗಳಿಗೆ ಇರುವ ಪೊಲೀಸರು ಬರುವುದೇ ಇಲ್ಲ ಎಂದು ರೈತರು ಹೇಳುತ್ತಿದ್ದಾರೆ. ಕಳೆದ ೧೫ ದಿನಗಳಿಂದ ಮೆಣಸಿನಕಾಯಿ ಕಳವು ಅಧಿಕವಾಗಿದೆ. ಈ ವರೆಗೂ ಒಬ್ಬರೆ ಒಬ್ಬ ಕಳ್ಳರನ್ನು ಪೊಲೀಸರು ಹಿಡಿದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬೀಟ್ಇರುವ ಪೊಲೀಸರು ಏನು ಮಾಡುತ್ತಾರೆ? ಎಲ್ಲಿ ಇರುತ್ತಾರೆ ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.