

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೇ 8 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹುಬ್ಬಳ್ಳಿ ಶಹರವನ್ನು ಕೆಂಪು ವಲಯ ಎಂದು ಗುರುತಿಸಿದೆ. ಇದನ್ನು ಮರೆತ ಸಾರ್ವಜನಿಕರು ಖಾಸಗಿ ವಾಹನಗಳ ಮೂಲಕ ರಸ್ತೆಗೆ ಇಳಿಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ಹೊರತುಪಡಿಸಿ ಇತರ ತಾಲೂಕುಗಳನ್ನು ಕಿತ್ತಳೆ ವಲಯ ಎಂದು ಜಿಲ್ಲಾಡಳಿತ ಘೊಷಿಸಿದೆ. ಹುಬ್ಬಳ್ಳಿ ರೆಡ್ ಝೋನ್ ಆಗಿ ಮುಂದುವರಿದಿದೆ. ಆದರೆ, ಹುಬ್ಬಳ್ಳಿಯಲ್ಲಿ ಹಲವರು ಓಡಾಡುತ್ತಿರುವುದನ್ನು ನೋಡಿದರೆ ತಮ್ಮದೂ ಕಿತ್ತಳೆ ವಲಯ ಎಂದು ಭಾವಿಸಿದಂತಿದೆ.
ಶುಕ್ರವಾರ ಇಲ್ಲಿನ ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಗೋಕುಲ ರಸ್ತೆ, ವಿದ್ಯಾನಗರ, ಕೊಪ್ಪಿಕರ ರಸ್ತೆ, ಸ್ಟೇಶನ್ ರಸ್ತೆ ಸೇರಿದಂತೆ ವಿವಿಧೆಡೆ ವಾಹನಗಳ ಭರಾಟೆ ಜೋರಾಗಿತ್ತು. ಆಟೋ, ದ್ವಿಚಕ್ರ ವಾಹನ, ಕಾರು, ಬಸ್ಗಳು ರಸ್ತೆಗೆ ಇಳಿದಿದ್ದವು. ಕೆಲವರು ಒಂದೇ ಬೈಕ್ನಲ್ಲಿ ಮೂವರು ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು.
ಪೊಲೀಸರು ನಾಪತ್ತೆ
ಲಾಕ್ಡೌನ್ ಸಂದರ್ಭದಲ್ಲಿ ಜಪ್ತಿ ಮಾಡಿದ್ದ ವಾಹನಗಳನ್ನು ಸಾರ್ವಜನಿಕರು ದಂಡ ಕಟ್ಟಿ ಬಿಡಿಸಿಕೊಂಡು ಹೋಗಬಹುದು ಎಂದು ಪೊಲೀಸ್ ಆಯುಕ್ತರು ಗುರುವಾರ ಘೊಷಿಸಿದ್ದರು. ಆ ಹಿನ್ನೆಲೆಯಲ್ಲಿ ಬಹುತೇಕ ಪೊಲೀಸರು ದಂಡ ಕಟ್ಟಿಸಿಕೊಂಡು ವಾಹನಗಳನ್ನು ಬಿಡುಗಡೆ ಮಾಡುವಲ್ಲಿ ನಿರತರಾಗಿದ್ದರು. ಹಾಗಾಗಿ, ಚನ್ನಮ್ಮ ವೃತ್ತ ಸೇರಿ ವಿವಿಧೆಡೆ ಪೊಲೀಸರ ಸಂಖ್ಯೆಯೂ ವಿರಳವಾಗಿತ್ತು. ಇದನ್ನೇ ಸದವಕಾಶ ಎಂದು ತಿಳಿದ ಕೆಲವರು ರಾಜಾರೋಷವಾಗಿ ರಸ್ತೆಯಲ್ಲಿ ಸಂಚರಿಸಿದರು.
ಆಜಾದ್ ಕಾಲನಿ ನಿಶ್ಯಬ್ಧ
ಕೇಶ್ವಾಪುರದ ಆಜಾದ್ ಕಾಲನಿ ನಿಶ್ಯಬ್ಧವಾಗಿತ್ತು. ಜನ ಮನೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ಗುರುವಾರ ಜನರ ಓಡಾಟ ಹೆಚ್ಚಾಗಿತ್ತು. ಆದರೆ ಶುಕ್ರವಾರ ಜನರ ಓಡಾಟ ವಿರಳವಾಗಿತ್ತು. ತುರ್ತು ಕೆಲಸ ಇದ್ದವರು ಮಾತ್ರ ಹೊರಗೆ ಬಂದಿದ್ದರು. ಪೊಲೀಸರು ಈ ಭಾಗದಲ್ಲಿ ಡ್ರೋನ್ ಕ್ಯಾಮರಾ ಬಳಕೆ ಮೂಲಕ ಭದ್ರತೆ ಹೆಚ್ಚಿಸಿರುವುದು ಸಹಕಾರಿಯಾಗಿದೆ ಎನ್ನಬಹುದು.
ಎಚ್ಚೆತ್ತುಕೊಳ್ಳದ ಶಾಂತಿನಗರ ಜನತೆ
ಹುಬ್ಬಳ್ಳಿಇಲ್ಲಿನ ಕೇಶ್ವಾಪುರ ಶಾಂತಿನಗರದ 57 ವರ್ಷದ ವ್ಯಕ್ತಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಬಳಿಕವೂ ಎಚ್ಚೆತ್ತುಕೊಳ್ಳದ ಶಾಂತಿನಗರದ ಕೆಲ ಜನತೆ ಅನಗತ್ಯವಾಗಿ ಓಡಾಡುತ್ತಿದ್ದ ದೃಶ್ಯ ಶುಕ್ರವಾರ ರಾತ್ರಿ ಕಂಡುಬಂತು.
ಕರೊನಾ ಮಹಾಮಾರಿ ಸದ್ದಿಲ್ಲದೇ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ಭಯವಿಲ್ಲದೇ ಓಡಾಡುತ್ತಿದ್ದರು. ಕಿರಾಣಿ ಅಂಗಡಿ, ಐಸ್ ಕ್ರೀಂ ಮಳಿಗೆ, ಬೇಕರಿ ಸೇರಿ ಕೆಲ ಅಂಗಡಿ ಮುಗ್ಗಟ್ಟುಗಳೂ ತೆರೆದಿದ್ದವು. ರಸ್ತೆಯಲ್ಲಿ ಬೈಕ್, ಕಾರಿನಲ್ಲಿ ಅನವಶ್ಯಕವಾಗಿ ಸಂಚರಿಸುತ್ತಿದ್ದರು. ನಂತರ ಎಚ್ಚೆತ್ತುಕೊಂಡ ಕೇಶ್ವಾಪುರ ಠಾಣೆ ಪೊಲೀಸರು ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
EndFragment