

ತರೀಕೆರೆ: ಎಚ್.ರಂಗಾಪುರ ಸಮೀಪದ ಕೆಂಗಯ್ಯನ ಕ್ಯಾಂಪ್ ನಿವಾಸಿಗಳ ಸಮಸ್ಯೆಗೆ ಸ್ವಲ್ಪಮಟ್ಟಿನ ಮುಕ್ತಿ ಸಿಕ್ಕಿದೆ. ಗ್ರಾಮದ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಅಪಾಯಕಾರಿ ಸ್ವಿಚ್‌ಗಳು, ಅಸಮರ್ಪಕ ಚರಂಡಿ ವ್ಯವಸ್ಥೆ, ಭದ್ರಾ ನಾಲೆ ಏರಿ ಮೇಲಿನ ದಾರಿಯಲ್ಲಿ ಸುರಿದ ಕಸದ ರಾಶಿಯಿಂದ ಕಿರಿಕಿರಿ ಹೀಗೆ ನಾನಾ ಸಮಸ್ಯೆಗಳಿಂದ ಅಲ್ಲಿನ ಜನ ಬಳಲುವಂತಾಗಿತ್ತು.
ಗ್ರಾಮದ ಸಮಸ್ಯೆ ಕುರಿತು ವಿಜಯವಾಣಿ ನ.17ರಂದು ನಾಲೆ ಏರಿ ಮೇಲಿನ ದಾರಿಯ ಸವಾರಿಯೇ ವರಿ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗ್ರಾಪಂನ ಗಮನ ಸೆಳೆದಿತ್ತು. ವರದಿಗೆ ಸ್ಪಂದಿಸಿದ ಗ್ರಾಪಂ ಅಧ್ಯಕ್ಷರು ಮತ್ತು ಸಿಬ್ಬಂದಿ ವಿದ್ಯುತ್ ಕಂಬಕ್ಕೆ ಹೊಸ ಸ್ವಿಚ್ ಅಳವಡಿಸಿ, ವೈರ್‌ಗಳನ್ನು ಸರಿಪಡಿಸಿದ್ದಾರೆ.
ಸ್ವಚ್ಛ ಸಂಕೀರ್ಣ ಜಾಗದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಕಸ ನಿರ್ವಹಣೆ ಸಮಸ್ಯೆ ಉಂಟಾಗಿದ್ದು, ಭದ್ರಾ ನಾಲೆ ಏರಿ ಮೇಲಿನ ದಾರಿಯುದ್ದಕ್ಕೂ ಸುರಿದಿರುವ ಅಡಕೆ ಸಿಪ್ಪೆ, ಕೋಳಿ ಅಂಗಡಿ ತ್ಯಾಜ್ಯ, ಹಸಿ ಮತ್ತು ಒಣ ಕಸ ಸೇರಿ ವಿವಿಧ ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಲು ನಾಲೆ ಪಕ್ಕದಲ್ಲೇ ಇರುವ ಗ್ರಾಪಂ ಅಧ್ಯಕ್ಷರ ಸ್ವಂತ ಜಮೀನಿನಲ್ಲಿ ಹೊಂಡ ತೋಡಿ ಸಂಗ್ರಹಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈ ಕುರಿತು ಎಂ.ಸಿ.ಹಳ್ಳಿ ಗ್ರಾಪಂ ಅಧ್ಯಕ್ಷ ಎನ್.ರಾಮೇಗೌಡ ಮಾತನಾಡಿ, ಅಪಾಯಕ್ಕೆ ಆಹ್ವಾನ ನೀಡುವಂತಿದ್ದ ವಿದ್ಯುತ್ ಕಂಬದ ಸ್ವಿಚ್ ಜತೆ ಬಾಯ್ತೆರೆದುಕೊಂಡಿದ್ದ ತಂತಿಗಳನ್ನು ಸರಿಪಡಿಸಲಾಗಿದೆ. ಎಲ್ಲ ಕಂಬಕ್ಕೂ ಒಂದೇ ಕಡೆ ಸ್ವಿಚ್ ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಭದ್ರಾ ನಾಲೆ ಏರಿ ಮೇಲಿನ ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಸುರಿದಿರುವ ಕಸವನ್ನು ಜೆಸಿಬಿಯಿಂದ ನನ್ನ ಜಮೀನಿನಲ್ಲಿ ಗುಂಡಿ ತೋಡಿ ಸಂಗ್ರಹಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಕ್ರಿಯಾಯೋಜನೆಯಲ್ಲಿ ಚರಂಡಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಳ್ಳಲಾಗುವುದು. ಶಾಸಕರ ಸಹಕಾರದಿಂದ ಕೆಂಗಯ್ಯನ ಕ್ಯಾಂಪ್‌ಗೆ ಸಂಪರ್ಕ ಕಲ್ಪಿಸುವ ಭದ್ರಾ ನಾಲೆ ಮೇಲಿನ ದಾರಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.