ಕೆ.ಹೊಸಕೋಟೆ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹ

IMG-20251013-WA0153
Published on

ಆಲೂರು: ಕೆ.ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಶ್ವತ ವೈದ್ಯರನ್ನು ನೇಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೆ.ಹೊಸಕೋಟೆ ಹೋಬಳಿ ವ್ಯಾಪ್ತಿಗೊಳಪಡುವ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಗಳಿಲ್ಲ. ಸರ್ಕಾರಿ ಆಸ್ಪತ್ರೆಗಳಿರುವ ರಾಯರಕೊಪ್ಪಲು, ಬಾಳ್ಳುಪೇಟೆ, ಯಸಳೂರು, ಹೆತ್ತೂರು, ಶುಕ್ರವಾರಸಂತೆ ಸೇರಿದಂತೆ ಯಾವುದೇ ಕೇಂದ್ರಕ್ಕೂ ರಾತ್ರಿ ವೇಳೆ ಹೋಗಬೇಕಾದರೂ ಕನಿಷ್ಠ ಹನ್ನೆರಡರಿಂದ ಹದಿನೈದು ಕಿ.ಮೀ. ಕ್ರಮಿಸಿ ಚಿಕಿತ್ಸೆ ಪಡೆಯಬೇಕಾಗಿದೆ.

ಕೆ.ಹೊಸಕೋಟೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇದೆ, ಪ್ರಯೋಗಾಲಯ ಇದೆ. ಆದರೂ ಪರೀಕ್ಷಕರ ಕೊರತೆ ಇದೆ. ಒಳರೋಗಿಗಳನ್ನು ದಾಖಲಿಸಿಕೊಳ್ಳುವ ಅವಕಾಶ ಇದ್ದರೂ ಅಗತ್ಯ ವ್ಯವಸ್ಥೆ ಇಲ್ಲ. ಸುಸಜ್ಜಿತ ವೈದ್ಯರ ವಸತಿ ನಿಲಯವಿದೆ. ಆದರೆ ರಾತ್ರಿ ಪಾಳಿಯಲ್ಲಿ ವೈದ್ಯರು ಲಭ್ಯವಿಲ್ಲ.

ಹಲವು ತಿಂಗಳಿನಿಂದ ಹಗಲು ವೇಳೆಯಲ್ಲಿ ವೈದ್ಯರು ಆಸ್ಪತ್ರೆಗೆ ಬಂದು ಹೋಗುತ್ತಾರೆ. ರಾತ್ರಿ ವೇಳೆಯಲ್ಲಿ ವೈದ್ಯರು ಸಿಗದ ಕಾರಣದಿಂದ ತುರ್ತು ಚಿಕಿತ್ಸೆ ದೊರಕದೆ ತೀವ್ರ ತೊಂದರೆಯಾಗಿದೆ. ಚನಿರಂತರವಾಗಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿ ಸೇವೆ ನೀಡುವ ವೈದ್ಯರನ್ನು ನೇಮಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net