ಕೆ-ಸೆಟ್ ಪರೀಕ್ಷೆ ನಡೆಸುವ ಜವಾಬ್ದಾರಿ ಕೆಇಎಗೆ

mysore university
Published on

ಮೈಸೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಮೈಸೂರು ವಿಶ್ವವಿದ್ಯಾಲಯದ ಕೈತಪ್ಪಿದೆ. ಇನ್ಮುಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಮೂಲಕ ಈ ಪರೀಕ್ಷೆ ನಡೆಯಲಿದೆ.

ರಾಜ್ಯ ಉನ್ನತ ಶಿಕ್ಷಣ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಮೈವಿವಿ ಕೆ-ಸೆಟ್ ನಡೆಸುವ ನೋಡಲ್ ಏಜೆನ್ಸಿಯಾಗಿದ್ದು, ಪರೀಕ್ಷೆ ನಡೆಸಲು ಯುಜಿಸಿ ಮಾನ್ಯತೆ ನೀಡಿದೆ. 2019ರಿಂದ ಮಾನ್ಯತೆ ನವೀಕರಣಗೊಂಡಿತ್ತು.
ಪ್ರತಿ ವರ್ಷ ಒಂದು ಬಾರಿಗೆ 42 ವಿಷಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, 2021ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದ್ದು, ಇದಕ್ಕೆ ಮೈಸೂರು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷೆಯ ಸಂಯೋಜಕರು, ಇತರರು ಸಂಪೂರ್ಣ ಹೊಣೆಗಾರರೆಂದು ದೂರುಗಳು ಬಂದಿವೆ. ಹಾಗಾಗಿ, ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಪ್ರತ್ಯೇಕ ತನಿಖೆಗೆ ಆದೇಶಿಸಿ ಸಮಿತಿ ಸಹ ರಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪರೀಕ್ಷೆಯಲ್ಲಿ ಅವ್ಯವಹಾರ ನಡೆದಲ್ಲಿ ಅರ್ಹತೆ ಇರುವ, ಸಾವಿರಾರು ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಇದರಿಂದ ಮುಂಬರುವ ಯುವಪೀಳಿಗೆಗೆ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕಾಗಿದ್ದು, ಅದಕ್ಕಾಗಿ ಸ್ವತಂತ್ರ ಸಂಸ್ಥೆಯಿಂದ ಇದನ್ನು ನಡೆಸುವುದು ಸೂಕ್ತವಾಗಿದೆಯೇ ಹೊರತು, ಯಾವುದೇ ವಿಶ್ವವಿದ್ಯಾಲಯದಿಂದಲ್ಲ ಎಂಬುದು ರಾಜ್ಯ ಸರ್ಕಾರಕ್ಕೆ ಮನವರಿಕೆಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ 2022ನೇ ಸಾಲನ್ನು ಒಳಗೊಂಡಂತೆ ಮುಂದಿನ ಆದೇಶದವರೆಗೆ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಮೂಲಕ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net