ಕೆ.ಸಿ.ರೋಡ್ ಪಬ್ಜಿ ಆಟ ಬಾಲಕನ ಪ್ರಾಣವನ್ನೇ ತೆಗೆಯಿತು

Published on

ಮಂಗಳೂರು: ಇಲ್ಲಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್ ಮೈದಾನದಲ್ಲಿ ಭಾನುವಾರ ಬೆಳಗ್ಗೆ 12 ವರ್ಷ ಪ್ರಾಯದ ಬಾಲಕನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳೀಯ ನಿವಾಸಿ ಮೊಹಮ್ಮದ್ ಆಕೀಫ್ ಮೃತಪಟ್ಟ ಬಾಲಕ. ಶನಿವಾರ ರಾತ್ರಿ 9 ಗಂಟೆಗೆ ಮೊಬೈಲ್ ನಲ್ಲಿ ಮಾತನಾಡುತ್ತ ಮನೆಯಿಂದ ಹೊರ ಹೋಗಿದ್ದಾನೆ. ತಡ ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಮನೆಯವರು ಕರೆ ಮಾಡಿದ್ದಾರೆ. ಆಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಇಂದು ಬೆಳಗ್ಗೆ ಮೈದಾನದ ಬಳಿಯಲ್ಲಿ ಆತನ ಶವ ಪತ್ತೆಯಾಗಿದೆ. ದೇಹದಲ್ಲಿ ಗಾಯದ ಗುರುತು ಇದ್ದು ಕೊಲೆ ಮಾಡಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.

ಪಬ್ಜೀ ಆಟ ಪ್ರಾಣ ತೆಗೆಯಿತು: ಮನೆಯಲ್ಲಿ ಮೊಬೈಲ್ ನಲ್ಲಿ ಪಬ್ಜಿ ಆಡುತ್ತಿದ್ದ ಬಾಲಕ ಆತನ ಸ್ನೇಹಿತ ದೀಪಕ್ ಎಂಬಾತ ಕರೆದನೆಂದು ಮೈದಾನದ ಕಡೆ ಹೋಗಿದ್ದಾನೆ. ಈ ಆಟದಲ್ಲಿ ಪ್ರತಿ ಸಾರಿ ಆಕೀಫ್ ಗೆಲುವು ಸಾಧಿಸುತ್ತಿದ್ದ. ಆದರೆ ನಿನ್ನೆ ಸೋತಿದ್ದ. ಆಗ ಅವರೊಳಗೆ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ದೀಪಕ್ ಕಲ್ಲು ಹೊತ್ತು ಹಾಕಿದಾಗ ಗಂಭೀರ ಗಾಯಗೊಂಡು ನೆಲಕ್ಕುರುಳಿದ್ದಾನೆ. ಬಳಿಕ ಆತನನ್ನು ಎಳೆದು ತಂದು ಮೈದಾನದ ಬದಿಯಲ್ಲಿ ಹಾಕಿ ಹೋಗಿದ್ದ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net