

ಮೈಸೂರು: ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ಸಾಹಿತ್ಯ ಕೃತಿಗಳ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹಿಮಾಲಯ ಪ್ರತಿಷ್ಠಾನದಿಂದ ಭಾನುವಾರ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಟಿ.ಶ್ರೀಮತಿ ಅವರ ‘ಸಮಸ್ಯಾಪೂರ್ಣ ಮುಕ್ತಕ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯವು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀಳುತ್ತದೆ. ನಾವು ಎಷ್ಟು ಕೃತಿಗಳನ್ನು ಓದುತ್ತೇವೆ ಅಷ್ಟು ಉಲ್ಲಾಸ ಮತ್ತು ಚೈತನ್ಯ ವೃದ್ಧಿಸುತ್ತದೆ. ಇದರಿಂದ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂದರು.
ರಾಜಕೀಯಕ್ಕೆ ಬರುವುದಕ್ಕೂ ಮುನ್ನ ನಾನೂ ಸಾಹಿತ್ಯದ ಪ್ರೇಮಿಯಾಗಿ ಸಾಹಿತಿಗಳ ಒಡನಾಟದಲ್ಲಿರುತ್ತಿದೆ. ಆದರೆ ಈಗ ರಾಜಕೀಯ ಒತ್ತಡದಿಂದ ಸಾಧ್ಯವಾಗುತ್ತಿಲ್ಲ. ಕೆ.ಟಿ.ಶ್ರೀಮತಿ ಅವರು ರಚಿಸಿರುವ ಸಮಸ್ಯಾ ಪೂರ್ಣ ಮುಕ್ತಕ ಕೃತಿಯು ಬಹಳಷ್ಟು ಅರ್ಥಪೂರ್ಣವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಗೌರವಾಧ್ಯಕ್ಷ ಎಸ್.ರಾಮಪ್ರಸಾದ್, ಲೇಖಕಿ ಕೆ.ಟಿ.ಶ್ರೀಮತಿ, ಕವಯತ್ರಿ ನಾಗಮ್ಮ, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಅನಂತ, ಪ್ರಕಾಶ್ ಇತರರು ಇದ್ದರು.