

ಹಾಸನ: ನಗರದ ಹೊಳೆನರಸೀಪುರ ರಸ್ತೆಯಲ್ಲಿರುವ ಕೆ.ಎಂ.ಎಫ್ ಫೀಡ್ ಫ್ಯಾಕ್ಟರಿ ಮುಂಭಾಗದಲ್ಲಿ ಕೆ.ಕೆ.ರೆಸಿಡೆನ್ಸಿ ಹಾಗೂ ಪಕ್ಕದಲ್ಲಿರುವ ಬೀಡ ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿ ಇಂದ್ರೇಗೌಡ ಮಾತನಾಡಿ, ಬಾರ್ ನಿಂದ ಮದ್ಯ ಸೇವಿಸಿ ಹೊರಬಂದು ಬಡಾವಣೆಗೆ ತೆರಳುವ ರಸ್ತೆಯಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಹೆಂಗಸರು ಮತ್ತು ಮಕ್ಕಳು ರಸ್ತೆಯಲ್ಲಿ ಸಂಚರಿಸಲು ಸಾದ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಸ್ಥಳೀಯರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ ಎಂದು ಅಳಲು ತೋಡಿಕೊಂಡರು.
ಬಾರ್‌ಗೆ ಮದ್ಯ ಸೇವಿಸಲು ಬರುವವರು ರಸ್ತೆಯ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲದಿದ್ದರೂ ಸಹ ಅಡ್ಡಲಾಗಿ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ ಇದರಿಂದ ಅಗಾಗ್ಗೆ ಅಪಘಾತ ಮತ್ತು ಜಗಳ ಉಂಟಾಗಲು ಕಾರಣವಾಗಿದೆ ಎಂದು ಆರೋಪಿಸಿದರು.
ಇನ್ನು ಬಾರ್ ಪಕ್ಕದಲ್ಲಿಯೇ ಬೀಡ ಅಂಗಡಿ ಇದ್ದು, ಬಾರ್‌ನಿಂದ ಕುಡಿದು ಬಂದ ಕುಡಕರು ಬೀಡ ತಿನ್ನಲು ಹಾಗೂ ಸಿಗರೇಟು ಸೇದಲು ಬೀಡ ಅಂಗಡಿ ಮುಂದೆ ಗುಂಪು ಗುಂಪಾಗಿ ನಿಂತು ಸಾರ್ವಜನಿಕರು ಓಡಾಡಲು ತುಂಬಾ ತೊಂದರೆಯುಂಟು ಮಾಡುತ್ತಿದ್ದಾರೆ. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಬೀಡ ಅಂಗಡಿಯ ಕುಡಿಯುವುದಕ್ಕೆ ಪ್ಲಾಸ್ಟಿಕ್ ಲೋಟ ಮಾರಾಟ ಮಾಡುತ್ತಿದ್ದಾರೆ. ಮದ್ಯ ಸೇವಿಸಿದ ಬಳಿಕ ಪ್ಲಾಸ್ಟಿಕ್ ಲೋಟಗಳನ್ನು ಅಲ್ಲೇ ಬಿಸಾಡಿ ಹೋಗುತ್ತಾರೆ ಇದರಿಂದ ಸ್ವಚ್ಛತೆ ಇಲ್ಲದೆ ರೋಗ ರುಜಿನಗಳು ಹರಡುವುದು, ಪ್ಲಾಸ್ಟಿಕ್ ಲೋಟಗಳಿ ಗಾಳಿಯಲ್ಲಿ ಹಾರಿ ಮನೆಯ ಮುಂದೆ ಬಂದು ಬೀಳುತ್ತಿವೆ ಎಂದು ಆರೋಪಿಸಿದರು.
ಈ ಬಗ್ಗೆ ನಗರಸಭಾ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಬಾರ್ ಮತ್ತು ಬೀಡ ಅಂಗಡಿಯನ್ನು ತೆರವು ಗೊಳಿಸಿ ಸಾರ್ವಜನಿಕರು ಹಾಗೂ ವಾಹನಗಳು ಸುಗಮವಾಗಿ ತಿರುಗಾಡಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭನೆಯಲ್ಲಿ ಇಂದ್ರೇಗೌಡ ರಾಧಾ, ಮಂಜುನಾಥ್, ಸುಮಿತ್ರ, ಅರ್ಚನಾ, ಮಮತಾ ಇತರರು ಇದ್ದರು.