

ತಿ.ನರಸೀಪುರ: ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಮಂಗಳವಾರ ರೈತನ ನಾಯಕ ಹಾಗೂ ಪಾಂಡವಪುರದ ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಏಳನೇ ವರ್ಷದ ಪುಣ್ಯಸ್ಮರಣೆ ನಡೆಯಿತು.
ತಾಲೂಕು ರೈತ ಸಂಘದಿಂದ ಹಮ್ಮಿಕೊಂಡಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರೈತಪರ ಹೋರಾಟಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ಮಾತನಾಡಿ, ರೈತಪರ ಹೋರಾಟದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರ ನೇರ, ನಿಷ್ಠುರತೆ ಚಳವಳಿಯೇ ನಮಗೆಲ್ಲರಿಗೂ ಹೋರಾಟದ ಹಾದಿಯ ಹೆಗ್ಗುರುತು. ಒಂದೆರಡು ಬಾರಿ ಶಾಸಕರಾಗಿ ಓರ್ವ ಜನಪ್ರತಿನಿಧಿ, ಜನರೊಟ್ಟಿಗೆ ನಡೆದುಕೊಳ್ಳಬೇಕಾದ ಬಗ್ಗೆಯೂ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಸ್ಮರಿಸಿದರು.
ಬಹು ಜನ ಸಮಾಜ ಪಕ್ಷದ ನೂತನ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಬಿ.ಆರ್. ಪುಟ್ಟಸ್ವಾಮಿ ಅವರನ್ನು ಅಭಿನಂದಿಸಲಾಯಿತು. ರೈತ ಸಂಘದ ಜಿಲ್ಲಾ ಕಾರ್ಯಕಾರಿ ಸದಸ್ಯ ಈ.ರಾಜು, ತಾಲೂಕು ಗೌರವಾಧ್ಯಕ್ಷ ಹಲವಾರ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಕೊತ್ತೇಗಾಲ ಶಾಂತಮೂರ್ತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಸುಜ್ಜಲೂರು ಚಂದ್ರಶೇಖರ್, ಬಿಎಸ್ಪಿ ಜಿಲ್ಲಾ ಸಂಯೋಜಕ ಬಿ. ಮಹದೇವಸ್ವಾಮಿ, ಮುಖಂಡರಾದ ಎಂ.ಎಲ್. ಹುಂಡಿ ಪ್ರಭುಸ್ವಾಮಿ, ಮಾಡ್ರಳ್ಳಿ ಪುಟ್ಟಬುದ್ಧಿ, ಮಹದೇವಯ್ಯ ಹಾಗೂ ಕುಕ್ಕೂರು ಗುರುಮಲ್ಲಯ್ಯ ಇದ್ದರು.