

ಹಾಸನ: ಮಾಜಿ ಸಚಿವ ಬಿ. ಶಿವರಾಂ ಅವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಕ್ಷಮೆ ಕೇಳಬೇಕು ಹಾಗೂ ಈ ವಿಚಾರವನ್ನು ಹೈಕಮಾಂಡ್‌ಗೆ ದೂರು ನೀಡಲಾಗುವುದು. ಕೂಡಲೇ ಸಚಿವರ ಬದಲಾವಣೆ ಮಾಡಬೇಕೆಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಕುಮಾರಸ್ವಾಮಿ ಆಗ್ರಹಿಸಿದರು.
ಲೋಕಸಭಾ ಚುನಾವಣೆಗೆ ಬೆರಳೆಣಿಕೆಯ ದಿನಗಳಷ್ಟಿದ್ದು, ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣರವರು ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲೂ ಪಕ್ಷದ ಸಂಘಟನೆ ವಿಚಾರವಾಗಿ ಸಭೆ, ಸಮಾರಂಭಗಳನ್ನು ಮಾಡದೆ ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆಯದೆ ಉಡಾಫೆ ವರ್ತನೆ ತೋರುತ್ತಿದ್ದಾರೆ. ನನಗೆ ಯಾವ ಹೈಕಮಾಂಡ್ ಲೆಕ್ಕಕ್ಕಿಲ್ಲ ಎಂಬ ಉದ್ದಟತನದ ಮಾತುಗಳು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಹಿರಿಯ ಕಾಂಗ್ರೆಸ್ ಕಟ್ಟಾಳು ಮಾಜಿ ಸಚಿವ ಬಿ. ಶಿವರಾಂ ಅವರನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಮಾತನಾಡಿರುವುದು ಜಿಲ್ಲೆಯ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ. ಇವರಿಗೆ ಉಸ್ತುವಾರಿ ಕೊಟ್ಟಿರುವುದು ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ತೇಜೋವಧೆ ಮಾಡುವುದಕ್ಕೋ ಅಥವಾ ಪಕ್ಷ ಸಂಘಟನೆ ಮಾಡವುದಕ್ಕೋ?. ಶಿವರಾಂ ಅವರು ಎಂದೂ ಕಾರ್ಯಕರ್ತರ, ಪಕ್ಷದ ಸಂಘಟನೆಯಲ್ಲಿ ಹಿಂದೆ ಸರಿದವರಲ್ಲ. ಇಂತಹ ನಿಷ್ಠಾವಂತ ಕಾಂಗ್ರೆಸ್ ನಾಯಕರು ಇರುವುದರಿಂದಲೇ ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಉಳಿದಿರುವುದು. ಆದ್ದರಿಂದ ಸಚಿವರು ಕೂಡಲೇ ಬಿ.ಶಿವರಾಂ ಅವರಲ್ಲಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದ್ದ ಎಚ್.ಸಿ. ಮಹಾದೇವಪ್ಪ ಅವರು ಪ್ರತಿ ಸಮುದಾಯಗಳಿಗೂ ಹಣ ನೀಡಿದ್ದರು. ಜಿಲ್ಲೆಯಲ್ಲಿ ಅಹಿಂದ ವರ್ಗದ ಮತಗಳು ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದು, ಪಕ್ಷದ ಸಂಘಟನೆಗೆ ಅಹಿಂದ ವರ್ಗದ ಮುಖಂಡರನ್ನು ತೊಡಗಿಸಿಕೊಂಡು ಸರ್ಕಾರ ಬಂದಾಗ ಅಧಿಕಾರ ಹಂಚಿಕೆಯಲ್ಲಿ ಅಹಿಂದ ವರ್ಗದ ಮುಖಂಡರನ್ನು ಕಡೆಗಣಿಸುತ್ತಿರುವುದು ವಿಷಾದನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಎಚ್.ಬಿ. ಅಮೀರ್ ಜಾನ್, ವೃತ್ತಿಪರ ಘಟಕದ ಜಿಲ್ಲಾಧ್ಯಕ್ಷ ಅಡಗೂರು ವೆಂಕಟೇಶ್, ಮೀನುಗಾರ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಎಸ್. ಸತೀಶ್, ಕಾಂಗ್ರೆಸ್ ಪರಿಶಿಷ್ಟ ಪಂಗಡದ ರಾಜ್ಯ ಕಾರ್ಯದರ್ಶಿ ಶೇಖರ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ರವಿ ಇತರರು ಉಪಸ್ಥಿತರಿದ್ದರು.