

ಹಾಸನ: ದಲಿತ ಕುಟುಂಬಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್ ಅವರನ್ನು ಭಾನುವಾರ ನಗರ ಪೊಲೀಸರು ವಶಕ್ಕೆ ಪಡೆದರು.
ಬೇಲೂರು ತಾಲ್ಲೂಕಿನ ರಾಮಚಂದ್ರಾಪುರ ಗ್ರಾಮದ ಸಿದ್ದಯ್ಯ ಅವರ ಜಮೀನು ಖರೀದಿಸಿ ಹಣ ನೀಡದೆ ವಂಚಿಸಿರುವ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಯಾವ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಆರ್‌ಪಿಐ ಸತೀಶ್ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲು ನಿರ್ಧರಿಸಿದ್ದರು. ಈ ಮಾಹಿತಿ ಅರಿತ ಪೊಲೀಸರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸತೀಶ್, ಸಿದ್ದಯ್ಯ ಅವರನ್ನು ವಶಕ್ಕೆ ಪಡೆದರು. ನಂತರ ಬಿಟ್ಟುಕಳುಹಿಸಿದರು.