ಕೆ.ಎಚ್.ರಾಮಯ್ಯ ವಿದ್ಯಾರ್ಥಿ ನಿಲಯ ಹಿರಿಯ ವಿದ್ಯಾರ್ಥಿ ಸಂಘವನ್ನು ಅಸ್ತಿತ್ವಕ್ಕೆ

Published on

ಮೈಸೂರು: ಕೆ.ಎಚ್.ರಾಮಯ್ಯ ವಿದ್ಯಾರ್ಥಿ ನಿಲಯ ಹಿರಿಯ ವಿದ್ಯಾರ್ಥಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಮೇ 28ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ, ಸರ್ಕಾರದ ನಿವೃತ್ತ ವಿಶೇಷ ಕಾರ್ಯದರ್ಶಿ ಡಾ.ಪಿ.ಬೋರೇಗೌಡ ತಿಳಿಸಿದರು.
ವಿದ್ಯಾವರ್ಧಕ ಕಾಲೇಜಿನಲ್ಲಿರುವ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಸಂಘದ ಗೌರವಾಧ್ಯಕ್ಷ ಕೆಇಆರ್‌ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಅವರು ಸಂಘವನ್ನು ಉದ್ಘಾಟಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಂಡ್ಯ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ, ನಿವೃತ್ತ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ, ಮಂಗಳೂರು ಐಎಸ್‌ಡಿ ಎಸ್‌ಪಿ ಡಾ.ಎ.ಎನ್.ಪ್ರಕಾಶ್‌ಗೌಡ, ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಬಾಲಚಂದ್ರ, ಐಟಿ-ಬಿಟಿ ನಿರ್ದೇಶಕ ಬಸವರಾಜು, ಕೆಪಿಸಿಎಲ್ ಮುಖ್ಯ ವಿಚಕ್ಷಣಾಧಿಕಾರಿ ಟಿ.ಪಿ. ಶಿವಕುಮಾರ್, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪಿ.ವಿಶ್ವನಾಥ್ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಒಕ್ಕಲಿಗ ಸಮುದಾಯದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ 1937ರಲ್ಲಿ ಗುಜ್ಜೇಗೌಡ ಅವರು ಕೆ.ಎಚ್.ರಾಮಯ್ಯ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಿದರು. ಕೇವಲ 12 ವಿದ್ಯಾರ್ಥಿಗಳಿಗೆ ಅನ್ನ , ವಸತಿಯಿಂದ ಆರಂಭಗೊಂಡ ನಿಲಯದಲ್ಲಿ ಈಗ 100 ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಲಾಗುತ್ತಿದೆ. ಎಚ್.ಸಿ.ದಾಸಪ್ಪ, ಸಾಹುಕಾರ್ ಚನ್ನಯ್ಯ, ಯಶೋಧರ ದಾಸಪ್ಪ, ತುಳಸಿದಾಸಪ್ಪ ಮುಂತಾದ ಮಹನೀಯರು ಕಟ್ಟಿ ಬೆಳೆಸಿದ ಈ ವಿದ್ಯಾರ್ಥಿನಿಲಯವು ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ದಿ ಪ್ರೊ. ಪಿ.ಎಂ.ಚಿಕ್ಕಬೋರಯ್ಯ ಸ್ಮರಣಾರ್ಥ ಅಮೃತ ವಯೋಮಾನ (75 ವರ್ಷ)ದ ನಿಲಯದ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸನ್ಮಾನಿತರಲ್ಲಿ ವಿಶ್ರಾಂತ ಕಾರ್ಯಪಾಲಕ ಅಭಿಯಂತರ ದಿವಂಗತ ತಿಮ್ಮೇಗೌಡ ಮತ್ತು ಮಕ್ಕಳ ತಜ್ಞ ದಿವಂಗತ ಡಾ.ಎನ್.ಬಿ.ಕೃಷ್ಣಪ್ಪ ಅವರಿಗೆ ಮರಣೋತ್ತರವಾಗಿ ಗೌರವ ಸಲ್ಲಿಸಲಾಗುವುದು. ಜತೆಗೆ 9 ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಕೆಂಪರಾಜೇಗೌಡ, ಖಜಾಂಚಿ ಡಾ.ಚೇತನ್, ಟ್ರಸ್ಟಿಗಳಾದ ಕೆ.ಟಿ.ಕೃಷ್ಣಪ್ಪ, ಬೂಕನಕೆರೆ ವಿಜಯೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net