ಕೆ.ಎಂ.ದೊಡ್ಡಿಯಲ್ಲಿ ವಾಹನಗಳ ಸಂಚಾರ ತಡೆ

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಕೆ.ಎಂ.ದೊಡ್ಡಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿದರು.
30KMD-1
Published on

ಕೆ.ಎಂ.ದೊಡ್ಡಿ: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ವಾಹನಗಳ ಸಂಚಾರ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.


ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ರೈತ ಸಂಘದ ರೈತರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ ಕಾವೇರಿ ನೀರು ಹರಿಸಿದಂತೆ ಉಪತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಕಾವೇರಿ ನೀರಾವರಿ ನಿರ್ವಹಣಾ ಮಂಡಳಿಯ ಆದೇಶ ರಾಜ್ಯದ ರೈತರಿಗೆ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ ಮಾತನಾಡಿ, ಮಂಡ್ಯ, ಮೈಸೂರು ಭಾಗದ ರೈತರಿಗೆ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶ ನೀಡಿ ನೀರು ಬಿಡುಗಡೆ ಮಾಡುವ ಕ್ರಮ ಸಮಂಜಸವಲ್ಲ ಎಂದು ಹರಿಹಾಯ್ದರು.


ರೈತ ಮುಖಂಡರಾದ ನಂಜುಂಡಪ್ಪ, ಕುದುರುಗುಂಡಿ ನಾಗರಾಜು, ಕರಡಕೆರೆ ಯೋಗೇಶ್, ಗುಡಿಗೆರೆ ಬಸವರಾಜು, ಪಣ್ಣದೊಡ್ಡಿ ವೆಂಕಟೇಶ್, ಅಣ್ಣೂರು ಸಿದ್ದೇಗೌಡ, ಚಿಕ್ಕಮರೀಗೌಡ, ಬೊಪ್ಪಸಮುದ್ರ ಮಲ್ಲೇಶ್, ಮುತ್ತುರಾಜು, ಶಿವಣ್ಣ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net