ಕೆ.ಎಂ.ದೊಡ್ಡಿಯಲ್ಲಿ ರೈತರ ಬೃಹತ್ ಸಮಾವೇಶ

25KMD-1
Published on

ರೈತರ 42ನೇ ವರ್ಷದ ಹುತಾತ್ಮ ದಿನಾಚರಣೆ

ಕೆ.ಎಂ.ದೊಡ್ಡಿ : ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರನ್ನು ಶೋಷಣೆ ಮಾಡುತ್ತಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗೆಜ್ಜಲಗೆರೆ ಗೋಲಿಬಾರ್‌ನಲ್ಲಿ ಮಡಿದ ರೈತರ 42ನೇ ವರ್ಷದ ಹುತಾತ್ಮ ದಿನಾಚರಣೆ, ರೈತರ ಬೃಹತ್ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಚುನಾವಣಾ ಸಂದರ್ಭದಲ್ಲಿ ಮಾತ್ರ ಮಾರುದ್ದ ಭಾಷಣ ಮಾಡುವ ರಾಜಕೀಯ ನಾಯಕರಿಗೆ ಕೃಷಿಕರ ಬಗ್ಗೆ ನಿಜವಾದ ಕಾಳಜಿ ಇಲ್ಲವಾಗಿದೆ. ರಾಜಕಾರಣಿಗಳು ರೈತರನ್ನು ಶೋಷಣೆ ಮಾಡಿ ಬದುಕುತ್ತಿದ್ದು, ನಾಡಿಗೆ ಅನ್ನ ನೀಡುವ ಕೃಷಿ ರಂಗದ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರೈತರು ಶೋಷಣೆಗೆ ಒಳಗಾಗುತ್ತಿರುವುದರಿಂದ ರೈತ ಸಂಘಟನೆ ಅಗತ್ಯವಿದೆ. ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ದನಿ ಎತ್ತಿ ರೈತರ ಹಕ್ಕುಗಳನ್ನು ಪಡೆಯಲು ಮುಂದಾಗಬೇಕಿದೆ ಎಂದು ಕಿವಿಮಾತು ಹೇಳಿದರು.ನಮ್ಮನ್ನಾಳುತ್ತಿರುವ ಸರಕಾರಗಳು ರೈತರ ಯಾವುದೇ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುತ್ತಿಲ್ಲ ಕಾರ್ಪೋರೆಟರ್ ಕಂಪನಿಗಳಿಗೆ ಮನ್ನಣೆ ನೀಡುವ ಕೇಂದ್ರ ಸರ್ಕಾರ ರೈತರನ್ನು ಕಡೆಗಣಿಸಿದೆ. ರೈತರ ಬಗ್ಗೆ ಕನಿಷ್ಠ ಕಾಳಜಿಯನ್ನೂ ವಹಿಸುತ್ತಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು.

ರೈತ ಚಳವಳಿಗಳನ್ನು ಹತ್ತಿಕ್ಕಲು ನಮ್ಮ ಸರ್ಕಾರಗಳು ಗೋಲಿಬಾರ್ ನಡೆಸಿ ಕೃಷಿಕರ ಜೀವ ತೆಗೆದುಕೊಂಡಿವೆ ಆದರೂ ರೈತರು ಅವುಗಳಿಗೆ ಜಗ್ಗದೇ ತಮ್ಮ ಹಕ್ಕು ಪಡೆಯಲು ಹೋರಾಟಗಳನ್ನು ನಡೆಸಿದ್ದಾರೆ. ರೈತ ಸಂಘ ಇಂತಹಾ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತಿದೆ ಎಂದರು.

ಅತ್ಯಂತ ದಯನೀಯ: ದ್ವಜಾರೋಹಣ ನೇರವೆರಿಸಿದ ರೈತ ಸಂಘದ ಮಹಿಳಾ ಘಟಕದ ಕಾರ್ಯದರ್ಶಿ ಪ್ರೊ. ಯದುಶೈಲಾ ಸಂಪತ್ ಮಾತನಾಡಿ, ಹಸಿದವರಿಗೆ ಅನ್ನ ಹಾಕುವ ರೈತ ತಾನು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದೇ ಆರ್ಥಿಕ ಸಂಕಷ್ಠಕ್ಕೆ ಸಿಲುಕಿದ್ದಾನೆ. ಇದು ಅತ್ಯಂತ ದಯನೀಯ ಸ್ಥಿತಿ ಎಂದರು. ರೈತ ಮುಖಂಡರಾಗಿದ್ದ ದಿ. ನಂಜುಂಡಸ್ವಾಮಿ, ಪುಟ್ಟಣ್ಣಯ್ಯ, ರುದ್ರಪ್ಪ, ಸುಂದರೇಶ್, ವಿ.ಅಶೋಕ್ ಸೇರಿದಂತೆ ನೂರಾರು ಹೋರಾಟಗಾರರು ತಮ್ಮ ಬದುಕನ್ನೇ ರೈತರ ಏಳಿಗೆಗೆ ಮುಡಿಪಾಗಿಟ್ಟಿದ್ದರು. ಅವರೆಲ್ಲರೂ ಹಾಕಿಕೊಟ್ಟ ಮಾರ್ಗದಲ್ಲಿ ರೈತಪರ ದ್ವನಿ ಎತ್ತಿ ಸಾಗುವ ಮೂಲಕ ನಮ್ಮ ಸಂಘಟನೆಗೆ ಹೊಸರೂಪ ನೀಡೋಣ ಎಂದು ಪ್ರೊ. ಯದುಶೈಲಾ ಹೇಳಿದರು. ಗೆಜ್ಜಲಗೆರೆಗೆ ಕಬ್ಬಿನ ಹೋರಾಟ ಇತಿಹಾಸವಾಗಿ ಉಳಿದಿದೆ. ಮಂಡ್ಯ ಜಿಲ್ಲೆಯ ಕಬ್ಬಿನ ಹೋರಾಟವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಿದೆ. ರೈತ ಸಂಘವನ್ನು ಮತ್ತಷ್ಟು ಬಲಿಷ್ಟಗೊಳಿಸಲು ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಯುವ ಕೃಷಿಕ ಸಮೂಹ ಮುಂದಾಗಬೇಕಿದೆ ಎಂದರು.

ಗುಂಡಿಪ್ಪಿದರೂ ನಾವು ಹೋರಾಟ ಬಿಟ್ಟಿಲ್ಲ:

ರೈತ ಸಂಘದ ವಿಭಾಗೀಯ ಘಟಕದ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯು 1982ರಲ್ಲಿ ಕಬ್ಬು ಒಪ್ಪಿಗೆ ಮಾಡಿದ ರೈತರಿಗೆ ಒಂದು ರೀತಿಯ ಹಣ, ಒಪ್ಪಿಗೆ ಮಾಡಿಸಿ ರೈತರಿಗೆ ಒಂದು ರೀತಿಯ ಹಣ ನೀಡುತ್ತಿತ್ತು. ಇದರಿಂದ ಬೇಸತ್ತು ರೈತರು ಹೋರಾಟಕ್ಕಿಳಿದಿದ್ದರು. ಬಂಡವಾಳ ಶಾಹಿಗಳ ಪರವಾಗಿದ್ದ ಗುಂಡೂರಾವ್ ಸರ್ಕಾರ ವಳಗೆರೆಹಳ್ಳಿ ನಾಥಗೌಡ, ಗೆಜ್ಜಲಗೆರೆ ಸಿದ್ದಪ್ಪ ಅವರನ್ನು ಗುಂಡಿಕ್ಕಿ ಕೊಂದಿತ್ತು. ಆದರೂ ರೈತ ಸಂಘ ತನ್ನ ಹೋರಾಟವನ್ನು ಉಳಿಸಿಕೊಂಡು ಇಂದಿಗೂ ಪ್ರಬಲವಾಗಿದೆ ಎಂದರು.

ಚಾಮರಾಜನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹೇಶ್ ಪ್ರಭು, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ ಮಾತನಾಡಿದರು. ಸಭೆಗೂ ಮುನ್ನ ರೈತ ಸಂಘದ ಕಾರ್ಯಕರ್ತರು, ಹಲಗೂರು ರಸ್ತೆ, ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಜನ ಜಾಗೃತಿ ಜಾಥಾ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net