ಕೆ.ಆರ್.ಸಾಗರ ಅಣೆಕಟ್ಟೆ ಮುಂಭಾಗ ಮುಂದುವರಿದ ಪ್ರತಿಭಟನೆ

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘದ ಮಂಡ್ಯ ಜಿಲ್ಲಾ ಘಟಕದ ಕೆ.ಆರ್.ಸಾಗರ ಅಣೆಕಟ್ಟೆ ಮುಂಭಾಗ ರೈತರು ಬುಧವಾರ ಪ್ರತಿಭಟನೆ ನಡೆಸಿದರು. ಹಾಡ್ಯ ರಮೇಶ್, ನಾರಾಯಣಸ್ವಾಮಿ, ದುರ್ಗೇಶ, ನಿರ್ಮಲಾ ರಮೇಶ್, ವಿಜಯಕುಮಾರ್, ಅಪ್ಪಾಜಿಗೌಡ ಇತರರಿದ್ದರು.
30-08--krs2 (1)
Published on

ಕೆ.ಆರ್.ಸಾಗರ: ಕೆ.ಆರ್.ಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘದ ಮಂಡ್ಯ ಜಿಲ್ಲಾ ಘಟಕದ ಪ್ರಾಂತಿಯ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ಮತ್ತು ಪ್ರಾಂತೀಯ ಸಂಚಾಲಕ ನಾರಾಯಣಸ್ವಾಮಿ ನೇತೃತ್ವದಲ್ಲಿ ಪದಾಧಿಕಾರಿಗಳು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಕೆ.ಆರ್.ಸಾಗರ ಅಣೆಕಟ್ಟೆ ಮುಂಭಾಗದಲ್ಲಿ ಧರಣಿ ನಡೆಸಿದರು.


ರೈತರಿಗೆ ಸುಳ್ಳು ಮಾಹಿತಿ ನೀಡಿದ ರಾಜ್ಯ ಸರ್ಕಾರ ನೀರು ಹರಿಸಿತು. ರಾಜಕೀಯ ಹಿತಾಸಕ್ತಿಗೋಸ್ಕರ ಇಂದಿನ ರಾಜ್ಯ ಸರ್ಕಾರ ರೈತರನ್ನು ಬಲಿ ನೀಡಿತು. ಮುಂದಾಲೋಚನೆ ಇಲ್ಲದ ಇಂದಿನ ಸರ್ಕಾರದ ನಡೆಯಿಂದ ಈ ಗತಿ ಬಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.


ಕಾವೇರಿ ನಿರ್ವಹಣಾ ಪ್ರಾಧಿಕಾರಿ ಕೇವಲ ತಮಿಳುನಾಡಿನ ರೈತರ ಹಿತ ಕಾಪಾಡುತ್ತಿದೆ. ಅದರ ತೀರ್ಮಾನ ಏಕಪಕ್ಷೀಯವಾಗಿದೆ. ಈ ಕಾರಣದಿಂದ ನಮ್ಮ ರಾಜ್ಯಕ್ಕೆ ಸಮರ್ಪಕವಾಗಿ ನ್ಯಾಯ ದೊರಕಿಲ್ಲ. ನಮಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘದ ಮಂಡ್ಯ ಜಿಲ್ಲಾ ಘಟಕದ ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ತಿಳಿಸಿದರು.


ಸ್ಥಳಕ್ಕೆ ಬಂದ ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಕಿಶೋರ್‌ಕುಮಾರ್ ಅವರಿಗೆ ಭಾರತೀಯ ಕಿಸಾನ್ ಸಂಘದ ವತಿಯಿಂದ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತ ಕಾಪಾಡಲು ನೀರು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.


ಪ್ರತಿಭಟನೆಯಲ್ಲಿ ಭಾರತಿಯ ಕಿಸಾನ್ ಸಂಘದ ಮಂಡ್ಯ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ, ದುರ್ಗೇಶ, ನಿರ್ಮಲಾ ರಮೇಶ, ವಿಜಯಕುಮಾರ್, ಅಪ್ಪಾಜಿಗೌಡ, ಶಿವಲಿಂಗೇಗೌಡ, ಜಗದೀಶ್, ಸುರೇಶ, ಜಯರಾಂ, ಪ್ರಸಾದಮೂರ್ತಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net