

ಮೈಸೂರು : ಸ್ಥಗಿತಗೊಂಡಿರುವ ಕೆ.ಆರ್.ಮಿಲ್ ಆವರಣದ ಸರ್ವೇ ನಂ.600ಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆಯದೆ, ತೆರಿಗೆ ಕಟ್ಟದೆ ಅನಧಿಕೃತವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.
ಈ ಕುರಿತು ಸಂಬಂಧಿಸಿದವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಸಂಘಟನೆ ಅಧ್ಯಕ್ಷ ಸಿದ್ದಲಿಂಗಪುರ ಮಹದೇವು ದೂರಿದರು.
1928ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಉದ್ದಿಮೆ ಸ್ಥಾಪಿಸಿದರು. 1984ರವರೆಗೆ ಈ ಕಾರ್ಖಾನೆ ಸುಲಲಿತವಾಗಿ ನಡೆಯಿತು. ಬಳಿಕ ಹಲವಾರು ಸಮಸ್ಯೆ ಹಾಗೂ ಕಾಣದ ಕೈಗಳಿಂದಾಗಿ ಬಂದ್ ಆಯಿತು.
ಬಳಿಕ ಲಿಕ್ವಿಡೇಟರ್ ನೇಮಕವಾದರು. ನಂತರ ಕಾರ್ಖಾನೆ ಪುನರಾರಂಭಿಸಿ ಕಾರ್ಮಿಕರ ಉದ್ಯೋಗ ಮುಂದುವರಿಸಬೇಕು ಎಂಬ ಷರತ್ತಿನೊಡನೆ ಗುತ್ತಿಗೆ ಆಧಾರದ ಮೇಲೆ ಬೇರೊಬ್ಬರಿಗೆ ನೀಡಲಾಯಿತು. ನಂತರ ಉದ್ದೇಶ ಈಡೇರಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹೀಗಿರುವಾಗ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಸರ್ವೇ ನಂ.600ರಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕುರಿತು ಸಿದ್ದಲಿಂಗಪುರ ಗ್ರಾಪಂ ನೀಡಿರುವ ನೋಟಿಸ್ ನಿರ್ಲಕ್ಷಿಸಲಾಗಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಎಸ್.ಸೋಮಣ್ಣ, ರಘು, ಚಂದ್ರಣ್ಣ, ಮಹದೇವಪ್ಪ ಇದ್ದರು.
----------