ಕೆ.ಆರ್. ನಗರ ಸರ್ಕಾರಿ ಆಸ್ಪತ್ರೆ ರಾಜ್ಯದಲ್ಲಿ ಪ್ರಥಮ ಸ್ಥಾನ

18 KRN-1
ಕೆ.ಆರ್.ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಾ.ರಾ. ಮಹೇಶ್ ಶನಿವಾರ ಭೂಮಿಪೂಜೆ ನೆರವೇರಿಸಿದರು. ಡಾ.ಎಂ.ಎಸ್. ನಾಗೇಂದ್ರ, ಡಾ.ಕೆ.ಆರ್. ಮಹೇಂದ್ರಪ್ಪ, ಡಾ. ಶಿವಶಂಕರ್, ಡಾ.ಕೆ.ಆರ್. ಚಂದ್ರಕಲಾ ಡಾ.ಭವಾನಿ, ಕೆ.ಎಲ್. ಜಗದೀಶ್, ಸಂತೋಷ್‌ಗೌಡ ಇನ್ನಿತರರು ಇದ್ದರು.
Published on

ಕೆ.ಆರ್.ನಗರ: ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 30 ರಿಂದ 50 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ 4.50 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಾಸಕ ಸಾ.ರಾ. ಮಹೇಶ್ ಭೂಮಿಪೂಜೆ ನೆರವೇರಿಸಿದರು.

ಜನರಿಗೆ ಮುಖ್ಯವಾಗಿ ಕೊಡಬೇಕಾದ್ದು ಆರೋಗ್ಯ, ಶಿಕ್ಷಣ, ರಸ್ತೆ ಸಂಪರ್ಕ. ನನ್ನ ಅಧಿಕಾರ ಅವಧಿಯಲ್ಲಿ ಅವುಗಳ ವಿಚಾರದಲ್ಲಿ ಪ್ರಗತಿ ಸಾಧಿಸಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಅವಿರತ ಶ್ರಮದಿಂದ ಪ್ರತಿ ತಿಂಗಳು 300ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತಿದ್ದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ಕಮಿಟಿಯಿಂದ ರಾಜ್ಯದಲ್ಲಿ 3ನೇ ಸ್ಥಾನ, ಮೈಸೂರು ವಿವಿ ವ್ಯಾಪ್ತಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ತಿಳಿಸಿದರು.

ಕೆಲವು ಸಣ್ಣಪುಟ್ಟ ರಸ್ತೆಗಳು ಬಿಟ್ಟರೆ ಉಳಿದ ಎಲ್ಲ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆಯಲ್ಲದೆ ನಾಲೆಗಳ ಅಭಿವೃದ್ಧಿ ಮೂಲಕ ರೈತರ ಬೆಳೆಗೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದ್ದು, ಎಲ್ಲ ರೀತಿಯಲ್ಲೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಲಾಗಿದೆ ಎಂದರು.

ಈ ಆಸ್ಪತ್ರೆ ತಂದಿದ್ದು ನಾನು. ಈಗ ಇದನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತಿದ್ದೇನೆ. ಮಿರ್ಲೆ ಡಿಪ್ಲೊಮಾ ಕಾಲೇಜಿಗೆ 4 ಕೋಟಿ ರೂ. ಅನುದಾನ, ಪಟ್ಟಣದಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್‌ಗೆ 6 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಮೃತ ಯೋಜನೆಯಡಿ 30 ಕೋಟಿ ರೂ. ವೆಚ್ಚದಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

25 ಕೋಟಿ ಸಾಲ: ಇಲ್ಲಿಯವರೆಗೆ ಯಾರ ಬಳಿಯೂ 1 ರೂಪಾಯಿ ಲಂಚ ಪಡೆದಿಲ್ಲ. ನಾನು ಚುನಾವಣೆಯಲ್ಲಿ ಹಣ ನೀಡುವುದಿಲ್ಲ. ಆದರೆ ಉಳಿದ ದಿನಗಳಲ್ಲಿ ಜನರ ಸೇವೆಗಾಗಿ ನನ್ನ ವೈಯಕ್ತಿಕ ಹಣ ಖರ್ಚು ಮಾಡುತಿದ್ದು, ಇದರಿಂದಾಗಿ 25 ಕೋಟಿ ರೂ. ಸಾಲ ಮಾಡಿದ್ದೇನೆ. ಹಿಂದಿನ ಚುನಾವಣೆಯಲ್ಲಿ ನಾನು ಮತ್ತು ನನ್ನ ಪತ್ನಿ ಸಾಲಗಾರರಾಗಿದ್ದೆವು. ಆದರೆ ಈಗ ನನ್ನ ಮಕ್ಕಳ ಮೇಲೂ ಸಾಲವಿದೆ ಎಂದರು.

ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಬೃಹತ್ ಗಾತ್ರದ ಕೊಬ್ಬರಿ ಹಾರ ಹಾಕುವ ಮೂಲಕ ಶಾಸಕ ಸಾ.ರಾ. ಮಹೇಶ್ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಡಾ. ಬಿ.ಸಿ.ರಾಯ್ ಪ್ರಶಸ್ತಿಗೆ ಭಾಜನರಾದ ಪ್ರಸೂತಿ ತಜ್ಞೆ ಡಾ.ಕೆ.ಆರ್. ಚಂದ್ರಕಲಾ ಅವರನ್ನು ಶಾಸಕರು ಸನ್ಮಾನಿಸಲಾಯಿತು.

ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಎಸ್. ನಾಗೇಂದ್ರ, ಟಿಎಚ್‌ಒ ಡಾ.ಕೆ.ಆರ್. ಮಹೇಂದ್ರಪ್ಪ, ಹಿರಿಯ ವೈದ್ಯ ಡಾ. ಶಿವಶಂಕರ್, ಪ್ರಸೂತಿ ತಜ್ಞಯರಾದ ಡಾ.ಕೆ.ಆರ್. ಚಂದ್ರಕಲಾ ಡಾ. ಭವಾನಿ, ಡಾ. ದಿವ್ಯತಾ, ಡಾ.ಹೇಮಾ, ಡಾ.ಸೌಮ್ಯಾಗೀತಾ, ಡಾ. ಶ್ವೇತಾ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ. ರಮೇಶ್, ಮೈಮುಲ್ ನಿವೃತ್ತ ಅಧಿಕಾರಿ ಡಾ.ಸಣ್ಣತಮ್ಮೇಗೌಡ, ಸಿಪಿಐ ರೇವಣ್ಣ, ಪುರಸಭಾ ಸದಸ್ಯರಾದ ಕೆ.ಎಲ್. ಜಗದೀಶ್, ಸಂತೋಷ್‌ಗೌಡ, ಉಮೇಶ್, ಮಾಜಿ ಅಧ್ಯಕ್ಷ ಡಿ. ಕಾಂತರಾಜ್, ಗ್ರಾಪಂ ಮಾಜಿ ಸದಸ್ಯ ಹೋಟೆಲ್ ಮಹದೇವ್ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net