

ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಒಂದೇ ಒಂದು ಮನೆಯನ್ನೂ ಕಟ್ಟಿಸಿಕೊಡಲಿಲ್ಲ ಎಂದು ಕಾಂಗ್ರೆಸ್ ಘೋಷಿತ ಅಭ್ಯರ್ಥಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಿಸಿದರು.
ನಾನು ಶಾಸಕನಾಗಿದ್ದಾಗ ಲಲಿತಾದ್ರಿಪುರದಲ್ಲಿ 14 ಎಕರೆ ಜಾಗವನ್ನು ಆಶ್ರಯ ಸಮಿತಿಗೆ ವಹಿಸಿಕೊಟ್ಟಿದ್ದೆ. ಗೊರೂರು ಮತ್ತು ಮಳಲವಾಡಿಯಲ್ಲಿ ತಲಾ 6 ಎಕರೆ ಜಾಗದಲ್ಲಿ 6500 ಮನೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ 2018ರ ಫೆಬ್ರವರಿಯಲ್ಲಿ ಸರ್ಕಾರದಿಂದ ಜಿಲ್ಲಾಧಿಕಾರಿ ಖಾತೆಗೆ 18 ಕೋಟಿ ರೂ. ಬಿಡುಗಡೆ ಆಗಿತ್ತು. ಫಲಾನುಭವಿಗಳ ಪಟ್ಟಿಯೂ ಸಿದ್ಧವಾಗಿತ್ತು. ಆದರೆ, ಬಳಿಕ ಏನೂ ಪ್ರಗತಿ ಆಗಲಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2018ರ ಚುನಾವಣೆಯಲ್ಲಿ ನಾನು ಪರಾಭವಗೊಂಡೆ. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಒಬ್ಬರಿಗೂ ಮನೆ ಕಟ್ಟಿಸಿಕೊಡಲಿಲ್ಲ. ಚುನಾವಣೆ ಬರುತ್ತಿದ್ದಂತೆ ಆಶ್ವಾಸನೆ ಪತ್ರವನ್ನು ಮನೆಗಳಿಗೆ ಕಳುಹಿಸಿಕೊಡಲಾಗಿದೆ. ಇದು ಜನರಿಗೆ ಮಾಡಿದ ಅನ್ಯಾಯ ಎಂದು ಕಿಡಿಕಾರಿದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ. ವಿದ್ಯಾರಣ್ಯಪುರಂನಲ್ಲಿರುವ ಸೂಯೇಜ್ ಫಾರ್ಮ್‌ನಲ್ಲಿ ಬೆಟ್ಟದಂತೆ ಬೆಳೆದಿರುವ ಕಸದ ರಾಶಿಯನ್ನು ತೆರವು ಮಾಡಿಲ್ಲ. ಕಸ ಹಾಕುವ ಸ್ಥಳವನ್ನು ಕೆಸರೆ, ರಾಯನಕರೆಗೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಲಾಗಿತ್ತು. ಆ ಕೆಲಸವೂ ಆಗಿಲ್ಲ. ಹೀಗೆ ಯಾವುದೇ ಕಾರ್ಯಗಳು ಆಗಿಲ್ಲ ಎಂದು ಆರೋಪಿಸಿದರು.
ಈ ಚುನಾವಣೆಯಲ್ಲಿ ಮತ್ತೊಂದು ಅವಕಾಶ ಮಾಡಿಕೊಟ್ಟರೆ ಕ್ಷೇತ್ರದಲ್ಲಿರುವ ವಸತಿರಹಿತ ಎಲ್ಲರಿಗೂ ಮನೆ ಕಟ್ಟಿಸಿಕೊಡಲಾಗುವುದು. ಅಗತ್ಯ ಇರುವ ಕಡೆ ಮೇಲ್ಸೇತುವೆ, ಸೂಯೇಜ್ ಫಾರ್ಮ್‌ನಲ್ಲಿರುವ ಕಸ ತೆರವುಗೊಳಿಸಿ ಸ್ವಚ್ಛಗೊಳಿಸಲಾಗುವುದು. 2013ರಿಂದ 2018ರ ವರೆಗೆ ನಾನು ಶಾಸಕನಾಗಿ ಸಾಕಷ್ಟು ಕೆಲಸ ಮಾಡಿರುವೆ. ಅದೇ ರೀತಿ ಅಭಿವೃದ್ಧಿ ದೃಷ್ಟಿಯಲ್ಲಿ ಕೆಲಸವನ್ನು ಮುಂದುವರಿಸಿಕೊಂಡು ಹೋಗುವೆ ಎಂದು ಭರವಸೆ ನೀಡಿದರು.
ಅಭಿವೃದ್ಧಿ ಎಂದರೆ ಡಾಂಬರ್ ಹಾಕುವುದಲ್ಲ, ಬದಲಿಗೆ ಹೊಸದಾಗಿ ಅಭಿವೃದ್ಧಿ ಕೆಲಸ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಪಕ್ಷದ ಇತರ ಆಕಾಂಕ್ಷಿಗಳನ್ನು ಭೇಟಿ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಾಗಿ ಮತಪ್ರಚಾರ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎಂಬುದು ಆ ಪಕ್ಷದ ಆಂತರಿಕ ವಿಷಯ. ಯಾರಿಗೆ ಟಿಕೆಟ್ ಕೊಟ್ಟರೂ ಹಿಂಜರಿಕೆ ಇಲ್ಲ ಎಂದರು.
ಏ.17ರಂದು ನಾಮಪತ್ರ ಸಲ್ಲಿಸುವೆ. ಅಂದು ಬೆಳಗ್ಗೆ 10ಕ್ಕೆ ಚಾಮುಂಡಿಪುರಂ ವೃತ್ತದಿಂದ ಪಾಲಿಕೆ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಲಾಗುವುದು ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಪಾಲಿಕೆ ಸದಸ್ಯರಾದ ಪುಷ್ಟಲತಾ ಚಿಕ್ಕಣ್ಣ, ಶೋಭಾ ಸುನಿಲ್ ಇದ್ದರು.