ಕೆ.ಆರ್. ಕ್ಷೇತ್ರದ ಎಲ್ಲೆಡೆ ಏ.20 ರಿಂದ ನದಿ ಮೂಲದಿಂದ ನೀರು : ಶಾಸಕ ಎಸ್.ಎ. ರಾಮದಾಸ್

mla s.a. ramdas
Published on

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಬೋರ್ವೆಲ್ ಮುಕ್ತ ಕ್ಷೇತ್ರವಾಗಿಸಲು ಏ.20 ರಿಂದ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 20 ಎಂಎಲ್ಡಿ ನೀರು ನದಿ ಮೂಲದಿಂದ ಹರಿದುಬರಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಬಿದರಗೂಡು ಸಮೀಪ ಇರುವ ಕಬಿನಿ ಜಲಾ ಸಂಗ್ರಹಗಾರಕ್ಕೆ ಗುರುವಾರ ನಗರ ಪಾಲಿಕೆ, ವಾಣಿವಿಲಾಸ ನೀರು ಸರಬರಾಜು ಕೇಂದ್ರ, ಜಲಮಂಡಳಿ, ವಿದ್ಯುತ್ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನದಿ ಮೂಲದಿಂದ ಪ್ರಸ್ತುತ ಕ್ಷೇತ್ರಕ್ಕೆ 60 ಎಂಎಲ್ಡಿ ನೀರು ಬರುತ್ತಿದೆ. 30 ಎಂಎಲ್ಡಿ ನೀರನ್ನು ಹೆಚ್ಚುವರಿಯಾಗಿ ತರುವ ಮೂಲಕ ಕ್ಷೇತ್ರವನ್ನು ಬೋರ್ವೆಲ್ ಮುಕ್ತ ಮಾಡುವ ಸಂಕಲ್ಪ ಮಾಡಲಾಗಿತ್ತು. ಅಂದುಕೊಂಡಂತೆ ಯೋಜನೆ ಭಾಗಶಃ ಪೂರ್ಣವಾಗಿದ್ದು, ಏ. 20ರಂದು ಕ್ಷೇತ್ರಕ್ಕೆ ಕಬಿನಿ ನೀರು ಹರಿಯಲಿದೆ ಎಂದು ಹೇಳಿದರು.

ಮೂರು ತಿಂಗಳ ನಂತರ 30 ಎಂಎಲ್‌ಡಿ ಜತೆಗೆ ಮತ್ತೆ ಹೊಸದಾಗಿ 30 ಎಂಎಲ್ಡಿ ನೀರು ಹೆಚ್ಚುವರಿಯಾಗಿ ದೊರೆಯಲಿದ್ದು, ಕ್ಷೇತ್ರಕ್ಕೆ ಒಟ್ಟು 120 ಎಂಎಲ್ಡಿ ನೀರು ದೊರೆಯಲಿದೆ. ನೀರಿನ ಹರಿವಿನ ಲೆಕ್ಕಾಚಾರ ಮಾಡಬೇಕಾದ ಹಿನ್ನೆಲೆಯಲ್ಲಿ ಮಾ.27 ರಂದು ಕ್ಷೇತ್ರದಲ್ಲಿ ಎಂಟು ಗಂಟೆಗಳ ಕಾಲ ನೀರಿನ ಸೇವೆಯಲ್ಲಿ ವ್ಯತ್ಯಯ ಆಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಉಪಮೇಯರ್ ಡಾ.ಜಿ.ರೂಪಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net