

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಸಂಯುತಾ ಪ್ರತಿಷ್ಠಾನದಿಂದ ಕನಕ-ಪುರಂದರೋತ್ಸವದ ನಿಮಿತ್ತ ನೀಡಲಾಗುವ ರಾಜ್ಯ ಮಟ್ಟದ ‘ಸಂಯುತಾ ಪುರಂದರ’ ಪ್ರಶಸ್ತಿಗೆ ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ನ ವಿಶ್ರಾಂತ ಯೋಜನಾಧಿಕಾರಿ ಕೆ. ಅಪ್ಪಣ್ಣಾಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಕನಕ-ಪುರಂದರೋತ್ಸವ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸಮ್ಮಾನ ಪತ್ರ ಒಳಗೊಂಡಿದೆ. ಹುಬ್ಬಳ್ಳಿ ಭವಾನಿನಗರ ನಂಜನಗೂಡು ರಾಯರಮಠದಲ್ಲಿ ಜನೆವರಿ 30ರಂದು ದಾಸ ಸಪ್ತಾಹದ ಕೊನೆಯ ದಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೋಶಿಗಿ ಅಪ್ಪಣ್ಣಾಚಾರ್ಯರು ತಮ್ಮ ಜೀವನವನ್ನು ವಿಶೇಷವಾಗಿ ದಾಸ ಸಾಹಿತ್ಯದ ಅನುಸಂಧಾನದಲ್ಲಿಯೇ ಕಳೆದವರು.
ತಿರುಪತಿ ಎಸ್. ವಿ. ವಿಶ್ವವಿದ್ಯಾಲಯದಿಂದ ಸಾಹಿತ್ಯ ಶಿರೋಮಣಿಯಾಗಿ ಹೊರ ಹೊಮ್ಮಿದವರು. 1979ರಿಂದ ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ನ ವಿಶೇಷಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ತಿರುಪತಿಯಿಂದ ಹೊರಗೆ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿದ್ದ ಕೀರ್ತಿ ಇವರದ್ದು. ಅಪ್ಪಣ್ಣಾಚಾರ್ಯರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ದಾಸ ಸಾಹಿತ್ಯವನ್ನು ಆಧರಿಸಿ ನಿರ್ವಿುಸಿದ ತೈಲವರ್ಣ ಚಿತ್ರಗಳಿಗೆ ರೂಪಕಲ್ಪನೆ ನೀಡಿದವರಲ್ಲಿ ಇವರೇ ಮೊದಲಿಗರು.