ಕೃಷ್ಣೇಗೌಡರಿಂದ ಭರ್ಜರಿ ಪ್ರಚಾರಹಳ್ಳಿಗಳಲ್ಲಿ ಭಾರಿ ಜನಬೆಂಬಲ

ಕೃಷ್ಣೇಗೌಡರಿಂದ ಭರ್ಜರಿ ಪ್ರಚಾರಹಳ್ಳಿಗಳಲ್ಲಿ ಭಾರಿ ಜನಬೆಂಬಲ
Published on

ಅರಕಲಗೂಡು : ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಗತಿಪರ ರೈತ ಎಂ.ಟಿ. ಕೃಷ್ಣೇಗೌಡ ಅವರು ಹಳ್ಳಿ ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದು, ಹೋದ ಕಡೆಯಲ್ಲೆಲ್ಲ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಕೃಷ್ಣೇಗೌಡರಿಗೆ ಸಾಕಷ್ಟು ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಹೋದ ಹಳ್ಳಿಗಳಲ್ಲಿ ಮಹಿಳೆಯರು ಮತ್ತು ಯುವಕರು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ.

ಬುಧವಾರ ತಾಲೂಕಿನ ಮರೂರು, ದುಮ್ಮಿ ಸೇರಿದಂತೆ ಹತ್ತಾರು ಹಳ್ಳಿಯಲ್ಲಿ ಚುನಾವಣೆ ಪ್ರಚಾರ ಮಾಡಿದರು.

ಬಳಿಕ ಜನರನ್ನ ಉದ್ದೇಶಿಸಿ ಮಾತನಾಡಿದ ಕೃಷ್ಣೇಗೌಡ ಅವರು, ರಾಜಕಾರಣದಲ್ಲಿ ನಾನು ಹಣ ಮಾಡಲು ಬಂದಿಲ್ಲ. ಜನರ ಸೇವೆಗಾಗಿ ರಾಜಕಾರಣಕ್ಕೆ ಬಂದಿದ್ದೇನೆ. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದೆ. ಕೊನೇ ಘಳಿಗೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ನನಗೆ ಅನ್ಯಾಯ ಮಾಡಿ ಬೇರೆಯವರಿಗೆ ಟಿಕೆಟ್ ನೀಡಿದರು. ಇದರಿಂದ ಸ್ವಾಭಿಮಾನದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.

ನಮ್ಮ ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಸಾಕಷ್ಟಿದೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವಲ್ಲಿ ಹಿಂದೆ ಆಡಳಿತ ಮಾಡಿದವರು ವಿಫಲರಾಗಿದ್ದಾರೆ. ನಾನು ಅಧಿಕಾರಕ್ಕೆ ಬಂದರೆ ಈ ಸಮಸ್ಯೆಯನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು ಹೆಚ್ಚು ಗಮನ ಹರಿಸಿ, ಸಮಸ್ಯೆ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.

ನನ್ನ ಜೋಡಿ ತೆಂಗಿನ ಮರದ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಜಯಶೀಲರನ್ನಾಗಿ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಎಲ್ಲರೂ ನನಗೆ ಮತ ನೀಡುವ ಮೂಲಕ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net