ಕೃಷ್ಣೇಗೌಡ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರ

ಕೃಷ್ಣೇಗೌಡ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರ
Published on

ಹಾಸನ: ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ ಹತ್ಯೆಯ ಎ-1 ಆರೋಪಿಯನ್ನು ಪೊಲೀಸರು ನಾಲ್ಕು ತಿಂಗಳಾದರೂ ಬಂಧಿಸಲು ಸಾಧ್ಯವಾಗದ ಹಿನ್ನಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.
ಹಣಕಾಸಿನ ವೈಷಮ್ಯಕ್ಕಾಗಿ ಕೃಷ್ಣೇಗೌಡ ಅವರನ್ನು ಆಗಸ್ಟ್ 9 ರಂದು ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಅವರ ಕಾರ್ಖಾನೆ ಎದುರು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣ ಸುಫಾರಿ ಕಿಲ್ಲರ್‌ಗಳು ಸೇರಿ ಒಟ್ಟು 14 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಕರಣದ ಪ್ರಮುಖ ಆರೋಪಿ ಯೋಗಾನಂದ ಹಾಗು ಅನಿಲ್ ಎಂಬ ಆರೋಪಿಗಳ ಸುಳಿವು ಇನ್ನೂ ಪತ್ತೆಯಾಗದ ಕಾರಣ ಪ್ರಕರಣವನ್ನು ಗಂಭೀರವಗಿ ಪರಿಗಣಿಸಿದ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಅವರು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಬಂಧನವಾಗಿರುವ 14 ಆರೋಪಿಗಳ ಪೈಕಿ ಯೋಗಾನಂದನ ಪತ್ನಿ ಸುಧಾರಾಣಿ ಮತ್ತು ಅವನ ಬಾಮೈದನ ಪತ್ನಿ ಚೈತ್ರಾ ಅವರಿಗೆ ಹೈಕೋರ್ಟ್ ನ.2ರಂದು ಜಾಮೀನು ಮಂಜೂರು ಮಾಡಿದೆ. ಆದರೂ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಈವರೆಗೂ ಬಂಧಿಸಲಾಗಿಲ್ಲ. ಹೀಗಾಗಿ ಪ್ರಕರಣ ಮುಚ್ಚಿ ಹೋಗಬಹುದು ಎಂಬ ಸಾಧ್ಯತೆ ಹಿನ್ನಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರ ಮಾಡಿರುವ ಎಡಿಜಿಪಿ, ತಕ್ಷಣದಿಂದ ಜಾರಿಗೆ ಬರುವಂತೆ ಪ್ರಕರಣದ ತನಿಖಾಧಿಕಾರಿ ಕೃಷ್ಣೇಗೌಡ ಹತ್ಯೆಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಸಿಐಡಿಗೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಸಿಐಡಿ ಅಧಿಕಾರಿಗಳು ಶೀಘ್ರದಲ್ಲೆ ಜಿಲ್ಲೆಗೆ ಆಗಮಿಸಿ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ.
ಕೃಷ್ಣೇಗೌಡ ಅವರು ಗ್ರಾನೈಟ್ ಉದ್ಯಮದ ಜೊತೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಆಪ್ತ ವಯಲಯದಲ್ಲಿ ಗುರುತಿಸಿಕೊಂಡಿದ್ದ ರಿಂದ ಈ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಆದರೆ, ಇದುವರೆಗೂ ತಾರ್ಕಿಕ ಅಂತ್ಯ ಕಾಣುವ ಮೂಲಕ ಹಳ್ಳ ಹಿಡಿಯುವ ಸಾಧ್ಯತೆ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net