

ಮಾಂಜರಿ: ಚಿಕ್ಕೋಡಿ ತಾಲೂಕಿನ ನದಿಗಳಲ್ಲೊಂದಾದ ಕೃಷ್ಣಾ ನದಿಯನ್ನು ಮಾಂಜರಿ-ಸೌಂದತ್ತಿ ಬಾಂದಾರ ಬಳಿ ಆವರಿಸಿದ್ದ ನೀರ್ಬಳ್ಳಿಯನ್ನು ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರು ತೆರವುಗೊಳಿಸಿದರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೃಷ್ಣಾ ನದಿ ನೀರಿನ ಮಟ್ಟ ಕುಸಿದಿತ್ತು. ಆದರೆ, ಪಂಚಗಂಗಾ ನದಿಯಲ್ಲಿ ನೀರ್ಬಳ್ಳಿ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿದ್ದರಿಂದ ನದಿಯಲ್ಲಿನ ನೀರು ಕಾಣಿಸುತ್ತಿರಲಿಲ್ಲ. ಕಳೆದ ವಾರ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪಂಚಗಂಗಾ ನದಿಯ ಸಂಪೂರ್ಣ ನೀರ್ಬಳ್ಳಿ ನರಶಿಂಹವಾಡಿ ಮತ್ತು ರಾಜಾಪುರ ಜಲಾಶಯದಿಂದ ಬಂದು ಕಲ್ಲೋಳ ಬಳಿ ಸಂಗ್ರಹವಾಗಿತ್ತು. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಕೃಷ್ಣಾ ನದಿಯಲ್ಲಿ ಬರುವ ಹೊಸ ನೀರಿನ ಜತೆಗೆ ನೀರ್ಬಳ್ಳಿಯೂ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತದೆ. ಅದನ್ನು ಗಂಭೀರವಾಗಿ ಪರಿಗಣಿಸಿದ ಸ್ವಯಂ ಸೇವಕರು ಬಳ್ಳಿ ತೆರವುಗೊಳಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾದರು. ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಂಯೋಜಕ ರಾಘವೇಂದ್ರ ಲಂಬುಗೋಳ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರಾದ ಹನುಮಂತ ಮಾಯನ್ನವರ, ರಾಮು ಕುರಣಿ, ಅಪ್ಪಯ್ಯ ಕಾಸಾಯಿ, ಲಕ್ಷ್ಮೀಕಾಂತ ಭೀಮನ್ನವರ, ಸಂದೀಪ ನವಲೆ, ರಾಕೇಶ ಮಾಯನ್ನವರ ಇತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.