ಕೃಷ್ಣೆಗೆ ದೇವಿ ಗರ್ಭಗುಡಿ ಪ್ರವೇಶಿಸುವ ತವಕ

ydg1
ಶ್ರೀ ಛಾಯಾ ಭಗವತಿ ದೇವಸ್ಥಾನದ ಕೆಳ ಮೆಟ್ಟಿಲುಗಳಿಗೆ ಸ್ಪರ್ಶಿಸುತ್ತಿರುವ ಕೃಷ್ಣೆ.
Published on

ಕೊಡೇಕಲ್: ನಾರಾಯಣಪುರದ ಬಸವಸಾಗರ ಜಲಾಶಯದ 25 ಮುಖ್ಯ ಕ್ರಸ್ಟ್ ಗೇಟ್‌ಗಳ ಮೂಲಕ ಭಾನುವಾರ 1.46 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸುತ್ತಿದ್ದು, ತೀರದ ಹಳ್ಳಿಗರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇನ್ನು ಕೆಳಭಾಗದಲ್ಲಿರುವ ಶ್ರೀ ಛಾಯಾ ಭಗವತಿ ದೇವಸ್ಥಾನದ ಕೆಳ ಮೆಟ್ಟಿಲುಗಳಿಗೆ ಕೃಷ್ಣೆ ಸ್ಪರ್ಶಿಸುತ್ತಿದ್ದು, ಗರ್ಭಗುಡಿ ಪ್ರವೇಶಿಸಲು ಹವಣಿಸುತ್ತಿರುವಂತೆ ಕಂಡುಬರುತ್ತಿದೆ.

ಮಹಾರಾಷ್ಟçದ ಕೊಂಕಣ ಹಾಗೂ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಹೀಗಾಗಿ 1.25 ಲಕ್ಷ ಕ್ಯೂಸೆಕ್ ನೀರು ಬಸವಸಾಗರಕ್ಕೆ ಹರಿಸುತ್ತಿದ್ದು, ಅಣೆಕಟ್ಟಿನ 25 ಮುಖ್ಯ ಕ್ರಸ್ಟ್ ಗೇಟ್‌ಗಳಿಂದ 1,46,000 ಕ್ಯೂಸೆಕ್ ನೀರು ಕೃಷ್ಣೆಗೆ ಹರಿಬಿಡಲಾಗಿದೆ. 33.313 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 28.655 ಟಿಎಂಸಿ ನೀರಿದೆ. ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ಛಾಯಾ ಭಗವತಿಗೆ ಕೃಷ್ಣೆ ದಿಗ್ಬಂಧನ ಹಾಕಲಿದ್ದಾಳೆ. ಅಂತಲೇ ಅರ್ಚಕ ಚಿದಂಬರಭಟ್ಟ ಜೋಶಿ ದೇವಿ ಉತ್ಸವ ಮೂರ್ತಿಗೆ ಮೇಲ್ಭಾಗದಲ್ಲಿ ಪೂಜೆ ಸಲ್ಲಿಸುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

25 ಮುಖ್ಯ ಕ್ರಸ್ಟ್ಗೇಟ್‌ಗಳಿಂದ ಬಣ್ಣಬಣ್ಣದ ವಿದ್ಯುತ್ ದೀಪಗಳ ಝಗಮಗದೊಂದಿಗೆ ಧುಮ್ಮಿಕ್ಕುತ್ತಿರುವ ಕೃಷ್ಣೆಯ ಸೊಬಗು ರಾತ್ರಿ ವೇಳೆ ಕಣ್ತುಂಬಿಕೊಳ್ಳಲು ಜನರು ಜಲಾಶಯ ಎದುರಿನ ಸೇತುವೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ತೀರದ ಗ್ರಾಮಸ್ಥರಲ್ಲಿ ಆತಂಕ: ಕೃಷ್ಣೆ ಒಡಲಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಕ್ರಮೇಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ದೇವರಗಡ್ಡಿ, ಮೇಲಿನಗಡ್ಡಿ, ರಾಯನಗೋಳ, ಅಮ್ಮಾಪುರ ಎಸ್.ಕೆ., ಗೆದ್ದಲಮರಿ, ಜುಮಾಲಪುರ, ಜುಮಾಲಪುರ ತಾಂಡಾ, ತಂಗಡಬೈಲ್, ನೀಲಕಂಠರಾಯನಗಡ್ಡಿ, ಬೆಂಚಿಗಡ್ಡಿ, ಶೆಳ್ಳಗಿ, ಮುಷ್ಟಳ್ಳಿ, ಚೌಡೇಶ್ವರಹಾಳ ಇತರ ಗ್ರಾಮಸ್ಥರನ್ನು ಪ್ರವಾಹ ಭೀತಿ ಕಾಡಲಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net