ಕೃಷ್ಣಾಪುರದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಗೆ ಗಾಯ

MDG philips
Published on

ಮೂಡಿಗೆರೆ: ಪಟ್ಟಣ ಸಮೀಪದ ಕೃಷ್ಣಾಪುರ ಎಂಬಲ್ಲಿ ಬುಧವಾರ ಬೆಳಗಿನ ಜಾವ 2 ಗಂಟೆಗೆ ಕಾಡಾನೆಯೊಂದು ಗ್ರಾಮದ ಫಿಲಿಪ್ ಕಾಸ್ಟೋಲಿನಾ(62) ಎಂಬುವರನ್ನು ತಿವಿದು ಗಾಯಗೊಳಿಸಿದೆ.

ಟ್ರಾೃಕ್ಟರ್ ಇಟ್ಟುಕೊಂಡು ಬಾಡಿಗೆ ಹೊಡೆದು ಜೀವನ ನಡೆಸುತ್ತಿದ್ದ ಕೃಷ್ಣಾಪುರದ ಫಿಲಿಪ್ ಕಾಸ್ಟೋಲಿನಾ ಮನೆಯಲ್ಲಿ ನಿದ್ರಿಸುತ್ತಿದ್ದು ಬೆಳಗಿನ ಜಾವ 2 ಗಂಟೆಗೆ ನಾಯಿ ಬೊಗಳಿದ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದಿದ್ದಾರೆ. ಕತ್ತಲಲ್ಲಿ ಸಮೀಪದಲ್ಲಿದ್ದ ಪ್ರಾಣಿಯ ಗುರುತು ಸಿಗದೆ ದನವಿರಬಹುದೆಂದು ಶಬ್ದಮಾಡಿ ಓಡಿಸಲು ನೋಡಿದಾಗ ಇದ್ದಕ್ಕಿದ್ದಂತೆ ಸಮೀಪದಲ್ಲೇ ಇದ್ದ ಕಾಡಾನೆ ಸೊಂಡಿಲಿನಿಂದ ತಿವಿದು ಎತ್ತಿ ಮೇಲಕ್ಕೆಸೆದಿದೆ. ಫಿಲಿಪ್ ಜೋರಾಗಿ ಕೂಗಿಕೊಂಡಿದ್ದು, ಮನೆಯಲ್ಲಿ ಮಲಗಿದ್ದ ಅವರ ಪತ್ನಿ ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ ಫಿಲಿಪ್ ಬಿದ್ದು ಒದ್ದಾಡುವುದನ್ನು ನೋಡಿ ಮಗನನ್ನು ಏಳಿಸಿ ಕರೆತಂದು ಫಿಲಿಪ್ ಅವರನ್ನು ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು.

ಆನೆ ದಾಳಿಯಿಂದ ಫಿಲಿಪ್ ಅವರಿಗೆ ಗಾಯವಾಗಿದೆ. ಮೂಡಿಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಎಸಿಎಫ್ ಕಾವ್ಯಾ ಮತ್ತು ತಂಡ ಸ್ಥಳ ಪರಿಶೀಲನೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net