

ವಿಜಯಪುರ: ಅಖಂಡ ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಕಾರ್ಖಾನೆಗಳಲ್ಲೊಂದಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಚುನಾವಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಬಹುತೇಕ ಸೆ. 1ಕ್ಕೆ ಮುಹೂರ್ತ ನಿಗದಿಯಾಗಿದೆ.
ಈಗಾಗಲೇ ಚುನಾವಣೆ ಅಧಿಕಾರಿಯನ್ನಾಗಿ ವಿಜಯಪುರ ಉಪವಿಭಾಗಾಧಿಕಾರಿ ಬಸಣ್ಣೆಪ್ಪ ಕಲಶೆಟ್ಟಿ ಅವರನ್ನು ನೇಮಿಸಲಾಗಿದೆ. ಚುನಾವಣೆಗೆ ಅಗತ್ಯ ಸಿದ್ಧತೆ ಕೈಗೊಂಡಿರುವ ಬಸಣ್ಣೆಪ್ಪ ಕಲಶೆಟ್ಟಿ ಸ್ಥಳ ಪರಿಶೀಲನೆ, ಮತದಾರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳ ಸ್ಥಾಪನೆಯತ್ತ ಕಾರ್ಯೋನ್ಮುಖರಾಗಿದ್ದಾರೆ. ಚುನಾವಣೆಗೆ ಬೇಕಾದ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಏತನ್ಮಧ್ಯೆ ಚುನಾವಣೆ ಆಕಾಂಕ್ಷಿಗಳು ಅವಳಿ ಜಿಲ್ಲೆಯಲ್ಲಾಗಲೇ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಒಬ್ಬ ವ್ಯವಸ್ಥಾಪಕ ನಿರ್ದೇಶಕ, 2 ನಾಮನಿರ್ದೇಶಿತ ಹಾಗೂ 17 ನಿರ್ದೇಶಕರನ್ನು ಕಾರ್ಖಾನೆ ಆಡಳಿತ ಮಂಡಳಿ ಹೊಂದಿದೆ. ಆ ಪೈಕಿ 17 ನಿರ್ದೇಶಕ ಸ್ಥಾನಗಳಿಗೆ ಸದ್ಯ ಚುನಾವಣೆ ನಡೆಯುತ್ತಿದೆ. ಬಳಿಕ ಸರ್ಕಾರದಿಂದ ಮತ್ತು ಡಿಸಿಸಿ ಬ್ಯಾಂಕ್ ಸೇರಿ ಇಬ್ಬರನ್ನು ನಾಮನಿರ್ದೇಶಿತರನ್ನಾಗಿ ನೇಮಕ ಮಾಡಲಾಗುತ್ತದೆ.
17 ಸ್ಥಾನಗಳಲ್ಲಿ ಕಬ್ಬು ಬೆಳೆಗಾರರ ಕ್ಷೇತ್ರದಿಂದ 15 (9 ಸಾಮಾನ್ಯ, 2 ಮಹಿಳೆಯರು, 2 ಸ್ಥಾನ ಹಿಂದುಳಿದ ‘ಎ’ ವರ್ಗ, 1 ಎಸ್‌ಸಿ ಹಾಗೂ 1 ಎಸ್‌ಟಿ) ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಕಾರ್ಖಾನೆ ಸದಸ್ಯ ಸೊಸೈಟಿಗಳಿಂದ 1 ನಿರ್ದೇಶಕ (ಬ ವರ್ಗ) ಸ್ಥಾನ, ಕಬ್ಬು ಬೆಳೆಗಾರರಲ್ಲದ ಸದಸ್ಯರಿಂದ 1 ನಿರ್ದೇಶಕ (ಡ ವರ್ಗ) ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು 8,200 ಮತದಾರರಿದ್ದು, ಇದರಲ್ಲಿ ಬೇಬಾಕಿ ತುಂಬಿ ಮತದಾನದ ಅರ್ಹತೆ ಪಡೆದವರೆಷ್ಟು ಎಂಬ ಲೆಕ್ಕಾಚಾರ ನಡೆದಿದೆ.
ಈ ಎಲ್ಲ ಪ್ರಕ್ರಿಯೆ ಬಳಿಕ ಅತಿಹೆಚ್ಚು ನಿರ್ದೇಶಕರ ಬೆಂಬಲ ಇರುವವರು ಕಾರ್ಖಾನೆ ಅಧ್ಯಕ್ಷ- ಉಪಾಧ್ಯಕ್ಷರಾಗಲಿದ್ದು ಅದಕ್ಕಾಗಿ ಈಗಿನಿಂದಲೇ ಶತಪ್ರಯತ್ನ ಆರಂಭಗೊಂಡಿದೆ. ತಮ್ಮ ಬೆಂಬಲಿತರನ್ನು ನಿರ್ದೇಶಕರನ್ನಾಗಿಸಲು ಕಸರತ್ತು ನಡೆಸಿದ್ದಾರೆ. ಅದಕ್ಕಾಗಿ ಪ್ಯಾನಲ್ ರಚಿಸಿಕೊಂಡು ಆಗಲೇ ಅಖಾಡಕ್ಕಿಳಿದಿದ್ದಾರೆ.
ಅವಳಿ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಆರಂಭಗೊಂಡಿದ್ದು, ಸಹಕಾರಿ ಕ್ಷೇತ್ರದ ಈ ಚುನಾವಣೆಯಲ್ಲಿ ಸಾಮಾನ್ಯವೆಂಬಂತೆ ರಾಜಕಾರಣವೂ ನುಸುಳುತ್ತಿದೆ. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ- ಉಪಾಧ್ಯಕ್ಷರಾಗುವುದು ಅವಳಿ ಜಿಲ್ಲೆಯಲ್ಲಿ ಪ್ರತಿಷ್ಠೆಯ ವಿಚಾರ. ಭವಿಷ್ಯದ ರಾಜಕೀಯಕ್ಕೆ ಈ ಚುನಾವಣೆ ಅಡಿಪಾಯವೆಂದೇ ಬಿಂಬಿಸಲಾಗಿದೆ. ರಾಜ್ಯ ರಾಜಕಾರಣಕ್ಕೆ ಧುಮುಕಲು ಕೆಲವರು ಇದನ್ನು ವೇದಿಕೆಯಾಗಿಸಿಕೊಂಡಿದ್ದರೆ, ಅವಳಿ ಜಿಲ್ಲೆ ರಾಜಕಾರಣಿಗಳು ತಮ್ಮ ಹಿಂಬಾಲಕರನ್ನು ಗದ್ದುಗೆಗೆ ತಂದು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಹವಣಿಸುತ್ತಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಹಾಗೂ ಮಾಜಿ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ ತಮ್ಮದೇ ಪ್ಯಾನಲ್ ರಚಿಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಈ ಎರಡೂ ಬಣಗಳು ಕಾಂಗ್ರೆಸ್‌ನ ಎ ಮತ್ತು ಬಿ ಟೀಂ ಎಂಬಂತೆ ಬಿಂಬಿಸಲಾಗಿದ್ದರಿಂದ ಇದೀಗ ಮತ್ತೊಂದು ಬಣ ರಚಿಸಲು ಕೆಲವರು ಉತ್ಸುಕರಾಗಿದ್ದಾರೆ.
1982ರಲ್ಲಿ ಅನುಮತಿ ಪಡೆದು 1992ರಲ್ಲಿ ಕೃಷ್ಣಾ ತೀರದಲ್ಲಿ ಕಾರ್ಯಾರಂಭಗೊಂಡ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಜಿಲ್ಲೆಯ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಖ್ಯಾತಿ ಪಡೆದಿದೆ. ಫೆ. 2, 2018ರಂದು ರಜತ ಮಹೋತ್ಸವ ಆಚರಿಸಿಕೊಂಡ ಈ ಕಾರ್ಖಾನೆ ಒಟ್ಟು 11 ಸಾವಿರ (ಅ, ಬ, ಡ) ಶೇರುದಾರರನ್ನು ಹೊಂದಿದೆ. ಆರು ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದ್ದು, 18.14 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. 50 ಕೆಎಲ್‌ಪಿಡಿ ಸಾಮರ್ಥ್ಯ ಇಥೆನಾಲ್ ಘಟಕ ಹೊಂದಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ಮಂಡಳಿ ಚುನಾವಣೆ ನಡೆಸಲಾಗುತ್ತಿದೆ. ಅವಳಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಕಾರ್ಖಾನೆಯಾದ್ದರಿಂದ ನಿರ್ದೇಶಕರ ಸ್ಥಾನಕ್ಕೆ ಎಲ್ಲಿಲ್ಲದ ಘನತೆ ಇದೆ. ಹೀಗಾಗಿ ಸಾರ್ವತ್ರಿಕ ಚುನಾವಣೆಯನ್ನೂ ಮೀರಿಸುವಂತೆ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಸದ್ಯಕ್ಕೆ ಸೆ. 1 ಕ್ಕೆ ಮುಹೂರ್ತ ಅಂದಾಜಿಸಲಾಗಿದೆ. ಈಗಾಗಲೇ ಚುನಾವಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಮತದಾರ ಪಟ್ಟಿ ಹಾಗೂ ಮತಗಟ್ಟೆಗಳ ಪರಿಶೀಲನೆ ಬಳಿಕ ವೇಳಾ ಪಟ್ಟಿ ಅಂತಿಮಗೊಳಿಸಲಾಗುವುದು. ಬಸಣ್ಣೆಪ್ಪ ಕಲಶೆಟ್ಟಿ, ವಿಜಯಪುರ ಉಪವಿಭಾಗಾಧಿಕಾರಿ (ಚುನಾವಣೆ ಅಧಿಕಾರಿ)