

ಮೈಸೂರು: ಬೀದಿಬದಿ ವ್ಯಾಪಾರಿಗಳು ಮೀಟರ್ ಬಡ್ಡಿದಾರರಿಂದ ಅನುಭವಿಸುತ್ತಿರುವ ಕಿರುಕುಳಕ್ಕೆ ಮುಕ್ತಿ ನೀಡಲು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಕೃಷ್ಣರಾಜ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಕ್ಷೇತ್ರವನ್ನು ಮೀಟರ್ ಬಡ್ಡಿ ರಹಿತ ಕ್ಷೇತ್ರವನ್ನಾಗಿಸಲು ಪಣ ತೊಡಲಾಗಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.
ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟಿಗೆ ಸಾಲ ಸೌಲಭ್ಯ ನೀಡುವ ಸಲುವಾಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಮೊದಲ ಹಂತದಲ್ಲಿ 10 ಸಾವಿರ ರೂ. ಸಾಲ ನೀಡಲಾಗುವುದು, ಸಾಲ ಮರುಪಾವತಿಸಿದ ನಂತರ ಎರಡನೇ ಹಂತದಲ್ಲಿ 20 ಸಾವಿರ ರೂ., 3ನೇ ಹಂತದಲ್ಲಿ 50 ಸಾವಿರ ರೂ., 4ನೇ ಹಂತದಲ್ಲಿ 1 ಲಕ್ಷ ರೂ. ಸಾಲ ನೀಡಲಾಗುವುದು. ಗುಂಪು ರಚಿಸಿಕೊಂಡು ವ್ಯಾಪಾರ ವಹಿವಾಟು ನಡೆಸಲು ಮುಂದಾದರೆ 2 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ದೊರೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವನಿಧಿ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದ್ದು, ಕೃಷ್ಣರಾಜ ಕ್ಷೇತ್ರದಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ 10205 ಅರ್ಜಿಗಳನ್ನು ಕ್ರೂಡೀಕರಿಸಲಾಗಿದ್ದು, ಅದರಲ್ಲಿ 9299 ಅರ್ಜಿಗಳಿಗೆ ಮಂಜೂರಾತಿ ದೊರಕಿದ್ದು, 8983 ಅರ್ಜಿದಾರರಿಗೆ ಸಾಲ ವಿತರಣೆ ಮಾಡಲಾಗಿದೆ. ಇನ್ನೂ 6 ಸಾವಿರ ಫಲಾನುಭವಿಗಳ ಆಯ್ಕೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ನಲ್ಮ್ ಹಾಗೂ ಮೈಸೂರು ಮಹಾ ನಗರಪಾಲಿಕೆ ಆಶ್ರಯದಲ್ಲಿ ಲಾನುಭವಿಗಳನ್ನು ಗುರುತಿಸಿ ಗುರುತಿನ ಕಾರ್ಡ್ ನೀಡಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಕಾರ್ಡ್ ಹೊಂದಿದವರಿಗೆ 2 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ ದೊರೆಯಲಿದೆ. ಸ್ವನಿಧಿ ಯೋಜನೆ ಜತೆಗೆ ಇ-ಶ್ರಮ್ ಕಾರ್ಡ್ ಅನ್ನು ಸಹ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಟ್ರಾಫಿಕ್ ಎಸಿಪಿ ಪರಶುರಾಮಪ್ಪ, ದೇವರಾಜ ಠಾಣೆ ಎಸಿಪಿ ಶಾಂತಮಲ್ಲಪ್ಪ ಹಾಗೂ ಇತರರು ಇದ್ದರು.
ಫೆ.20 ರಿಂದ ನೋಂದಣಿ ಪ್ರಾರಂಭ
ಸ್ವನಿಧಿ ಯೋಜನೆಗೆ ಅರ್ಹ ಫಲಾನುಭವಿಗಳನ್ನು ನೋಂದಾಯಿಸುವ ಹಾಗೂ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಫೆ.20 ರಂದು ಬೆ.11ಕ್ಕೆ ನಂಜುಮಳಿಗೆ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಆಯುಕ್ತ ಜಿ. ಲಕ್ಷ್ಮೀಕಾಂತ್ ರೆಡ್ಡಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರದ ರಾಜ್ಯ ಹಣಕಾಸು ಸಚಿವ ಭಗವದ್ ಕಿಶನ್ ರಾವ್ ಕಾರಡ್ ಕೆ.ಆರ್. ಕ್ಷೇತ್ರಕ್ಕೆ ಆಗಮಿಸಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಿದ್ದಾರೆ ಎಂದು ಎಸ್.ಎ. ರಾಮದಾಸ್ ತಿಳಿಸಿದರು.
ಪಾಲಿಕೆಯ 9 ವಲಯ ಕಚೇರಿಗಳಲ್ಲಿ ಫೆ.20 ರಿಂದ 24ರವರೆಗೆ ಪ್ರತಿದಿನ ಬೆಳಗ್ಗೆ 10.30 ರಿಂದ ಸಂಜೆ 5ರವರೆಗೆ ನೋಂದಣಿ ಕಾರ್ಯ ನಡೆಯಲಿದ್ದು, ಅರ್ಹ ಬೀದಿ ಬದಿ ವ್ಯಾಪಾರಿಗಳು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಲಾಗಿದ್ದು, ಯಾರ‌್ಯಾರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂಬ ಬಗ್ಗೆ ಪೊಲೀಸರು, ಪಾಲಿಕೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ದಾಖಲೆ ಸಿದ್ಧಪಡಿಸಿದ್ದಾರೆ. ಹಾಗಾಗಿ ಅರ್ಹರಿಗೆ ಮಾತ್ರ ಈ ಯೋಜನೆ ಲಾಭ ದೊರೆಯಲಿದೆ. ಅನರ್ಹರು ಯೋಜನೆಯ ಲಾಭ ಪಡೆಯದಂತೆ ಎಚ್ಚರ ವಹಿಸಲಾಗಿದೆ.
ಎಸ್.ಎ.ರಾಮದಾಸ್, ಶಾಸಕ.