ಕೃಷ್ಣರಾಜ ಕ್ಷೇತ್ರದಲ್ಲಿ 9,200 ಗರ್ಭಿಣಿಯರಿಗೆ ಮಡಿಲು ಯೋಜನೆ : ಶಾಸಕ ಎಸ್.ಎ. ರಾಮದಾಸ್

Ramdas
Published on

ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಪ್ರತಿ ಹಂತದಲ್ಲಿಯೂ ಮಾದರಿ ನಡೆ ಅನುಸರಿಸಿದ್ದು, ಈವರೆಗೆ 9200 ಗರ್ಭಿಣಿಯರಿಗೆ ಮಡಿಲು ಯೋಜನೆ ತಲುಪಿಸಲಾಗಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.64ರಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯೋಗಕ್ಷೇಮ ಯಾತ್ರೆ ಪ್ರಯುಕ್ತ ವಿವೇಕಾನಂದನಗರ ಬಡಾವಣೆಯ ಗಣಪತಿ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಕ್ಷೇತ್ರದ ಗರ್ಭಿಣಿಯರ ಅಣ್ಣನಾಗಿ ಸೇವೆ ಮಾಡಲು ಸದಾವಕಾಶ ನನಗೆ ದೊರೆತ್ತಿರುವುದು ಹೆಮ್ಮೆಯ ವಿಷಯ. ಈವರೆಗೆ ಕ್ಷೇತ್ರದಲ್ಲಿ 8800 ಗರ್ಭಿಣಿಯರಿಗೆ ಮಡಿಲು ತುಂಬಲಾಗಿದೆ. ಮಾ.18 ರಂದು 400 ಗರ್ಭಿಣಿಯರಿಗೆ ಮಡಿಲು ತುಂಬಲಾಗುತ್ತಿದೆ. ಪ್ರತಿ ಆರು ತಿಂಗಳಿಗೊಮ್ಮೆ ಈ ಕಾರ್ಯ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದರು.

ಇಡೀ ಕ್ಷೇತ್ರ ಮಾದರಿ ಎಂಬುದಕ್ಕೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರುಗಳೇ ಕ್ಷೇತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದೇ ಸಾಕ್ಷಿಯಾಗಿದೆ. ಮನುಷ್ಯರಿಗೆ ಮಾತ್ರವಲ್ಲ, ಬೀದಿ ನಾಯಿಗಳು ಹಾಗೂ ಕೋತಿಗಳು ಕೂಡ ಗೌರವಯುತ ಬದುಕು ಸಾಗಿಸಬೇಕೆನ್ನುವ ಆಶಯದಿಂದ ಅವುಗಳಿಗಾಗಿ ಸುಸಜ್ಜಿತವಾದ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಮಾ.25 ರಂದು ಶ್ವಾನಗಳ ಪುನರ್ವಸತಿ ಕೇಂದ್ರ ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿರುವ ತುಳಸೀದಾಸ್ ಆಸ್ಪತ್ರೆ ಹಾಗೂ ಜಯನಗರ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಗೆ ಸರಿಸಾಟಿಯಾಗಿ ನಿರ್ಮಿಸಲಾಗಿದೆ. ನಿರೀಕ್ಷೆಗೆ ಮೀರಿದ ಸೇವೆ ದೊರೆಯುತ್ತಿದೆ. ಪರಿಣಾಮ, ಜಯನಗರ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ 36 ಲಕ್ಷ ರೂ. ಬಹುಮಾನ ಬಂದಿದೆ. ಅದು ಒಂದು ದಾಖಲೆಯಾಗಿದೆ ಎಂದು ತಿಳಿಸಿದರು.

ಅಂದುಕೊಂಡಂತೆ ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಪ್ರಮಾಣದ ಕಾರ್ಯಯೋಜನೆ ರೂಪಿಸಿ ಅನುಷ್ಠಾನ ಮಾಡುವ ಮೂಲಕ ರಾಜ್ಯದಲ್ಲಿಯೇ ನಂ.1 ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿಮ್ಮೆಲ್ಲರ ವಿಶ್ವಾಸ, ಪ್ರೀತಿ, ಸಹಕಾರವೇ ಇದಕ್ಕೆ ಕಾರಣವಾಗಿದೆ. ಇಡೀ ಕ್ಷೇತ್ರವನ್ನು ಬೋರ್ವೆಲ್ ಮುಕ್ತ ಮಾಡಲಾಗಿದೆ. 482 ಕಿ.ಮೀ. ರಸ್ತೆಯನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಲಾಗಿದೆ. ರಾಜಕಾಲುವೆ, ಯುಜಿಡಿ, ಮಳೆ ನೀರಿನ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net