

ಮೈಸೂರು: ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾರ್ಥ ನಗರದ ಮೋಕ್ಷ ಮಾರ್ಗ, ಇಟ್ಟಿಗೆಗೂಡಿನ ಎಂಜಿ ರಸ್ತೆ ಮತ್ತು ಅಗ್ರಹಾರ ಭಾಗದ ಶಂಕರಮಠದ ಬಳಿ ರಾಜಕಾಲುವೆ ದುರಸ್ತಿ ಕಾಮಗಾರಿಗೆ ಶಾಸಕ ಎಸ್.ಎ. ರಾಮದಾಸ್ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ನಗರದ ಬಹುಪಾಲು ಮಳೆ ನೀರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗಿರುವ ರಾಜಕಾಲುವೆ ಮೂಲಕ ಹರಿದು ಸೂಯೇಜ್ ಫಾರ್ಮ್ ಸೇರುತ್ತಿದೆ. ಪರಿಣಾಮ, ರಾಜಕಾಲುವೆ ಮೇಲೆ ಒತ್ತಡ ಹೆಚ್ಚಿ ಹಲವೆಡೆ ಕುಸಿದಿದೆ. ಇನ್ನು ಕೆಲವೆಡೆ ಯುಜಿಡಿ ನೀರು ಕೂಡ ಕಾಲುವೆ ಮೂಲಕ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಾಕಾಲುವೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿರುವುದು ಬಹುತೇಕ ಹಳೆಯ ಚರಂಡಿ, ರಾಜಾ ಕಾಲುವೆಗಳಾಗಿವೆ. ಹೀಗಾಗಿ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತಿತ್ತು. ಈ ಸಮಸ್ಯೆಯ ಕುರಿತು ಮುಖ್ಯಮಂತ್ರಿ ಅವರ ಗಮನ ಸೆಳೆದಾಗ 96 ಕೋಟಿ ರೂ. ಅನುದಾನ ನೀಡಲು ಸಮ್ಮತಿಸಿ ಮೊದಲ ಹಂತದ 44 ಕೋಟಿ ರೂ. ಮೊತ್ತ ನೀಡಿದ್ದಾರೆ. ಮೊದಲ ಹಂತದ ಕಾಮಗಾರಿಯು ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಈ ಸಂದರ್ಭ ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪಾ, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಸ್ಥಳೀಯ ಮುಖಂಡರಾದ ಮಹದೇವಮ್ಮ, ಪ್ರಸನ್ನ, ಸೋಮು, ಸಂತೋಷ್, ಚಿದಂಬರ, ಕೃಷ್ಣ, ಭಾರತಿ, ಗೋಕುಲ್ ಗೋವರ್ಧನ್, ಜರ್ನಾದನ್, ಹೊಯ್ಸಳ, ಜೀವನ್, ಹರೀಶ್, ನವೀನ್, ಬಾಲಕೃಷ್ಣ, ರಾಮಪ್ರಸಾದ್, ನಾರಾಯಣ್, ವೆಂಕಟೇಶ, ಚಂದ್ರು, ವಾದಿರಾಜ್ ಬಲ್ಲಾಳ್, ಮಹೇಶ್, ಶಿವು, ಶಾಂತಮ್ಮ ಹಾಗೂ ಇತರರು ಇದ್ದರು.