ಕೃಷ್ಣರಾಜ ಕ್ಷೇತ್ರ ಕೊಳವೆಬಾವಿ ರಹಿತ ಕ್ಷೇತ್ರ : ಎಸ್.ಎ. ರಾಮದಾಸ್

mla s.a. ramdas
Published on

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರವನ್ನು ಕೊಳವೆಬಾವಿ ರಹಿತ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಸಂಕಲ್ಪ ಸಾಕಾರಗೊಂಡಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.

ಕ್ಷೇತ್ರ ವ್ಯಾಪ್ತಿಯ 52ನೇ ವಾರ್ಡ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತ ನಾಡಿ, ಕ್ಷೇತ್ರವನ್ನು ಕೊಳವೆಬಾವಿ ಮುಕ್ತಗೊಳಿಸುವ ನಿರ್ಧಾರ ಮಾಡಿ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಲಾಯಿತು. ಪರಿಣಾಮ, ಮಾರ್ಚ್ ಅಂತ್ಯದೊಳಗೆ ಎಲ್ಲ ಯೋಜನೆಗಳು ಪೂರ್ಣಗೊಳ್ಳಲಿದ್ದು, ಈಗಿರುವ ಎಲ್ಲ ಕೊಳವೆಬಾವಿಗಳನ್ನು ಉದ್ಯಾನ ನಿರ್ವಹಣೆಗೆ ಬಳಕೆ ಮಾಡಲಾಗುವುದು ಎಂದರು.

ಕೆಸಿ ಹಾಗೂ ಜೆಸಿ ಬಡಾವಣೆ, ವೆಂಕಟಲಿಂಗಯ್ಯ ಬಡಾವಣೆ, ಸೆಂಚುರಿ ಪಾರ್ಕ್, ಇಟ್ಟಿಗೆಗೂಡು ಬಡಾವಣೆಗೆ ಸಮಗ್ರವಾಗಿ ಕುಡಿಯುವ ನೀರು ಕಲ್ಪಿಸುವ ಸಲುವಾಗಿ ಇಂದು 10 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಮಕ್ಕಳಿಗಾಗಿ 56 ಲಕ್ಷ ರೂ.ವೆಚ್ಚದಲ್ಲಿ ವಿಜ್ಞಾನ ಪಾರ್ಕ್ ನಿರ್ಮಾಣ ಕಾರ್ಯ ನಡೆದಿದೆ. ಸೆಂಚುರಿ ಪಾರ್ಕ್ ಜತೆಗೆ ಇತರೆ ಉದ್ಯಾನಗಳ ಅಭಿವೃದ್ಧಿ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಇದರ ಹಿಂದೆ ಜನಸಾಮಾನ್ಯರ ಆಶೀರ್ವಾದ ಇದ್ದು, ಇವೆಲ್ಲವುಗಳ ನಿರ್ವಹಣೆಯ ಹೊಣೆ ಜನಸಾಮಾನ್ಯರದ್ದೇ ಆಗಿದೆ ಎಂದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಗೋಕುಲ್ ಗೋವರ್ಧನ್, ಪ್ರಭಾಕರರಾವ್ ಶಿಂಧೆ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net