ಕೃಷ್ಣನ ನ್ಯಾಯ‌, ನೀತಿ‌ ಪ್ರತಿಪಾದಿಸೋಣ

Published on

ಬಳ್ಳಾರಿ : ಸಾಧನೆಯ ಹಾದಿಯಲ್ಲಿ ಜೀವನ ಸಾಗಿಸಲು ಶ್ರೀಕೃಷ್ಣನ ನ್ಯಾಯ-ನೀತಿಯ ಸಾರವನ್ನು ಪ್ರತಿಪಾದಿಸೋಣ ಎಂದು ಸಂಸದ ಈ.ತುಕಾರಾಮ್ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತ್ಯೋತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದ್ವಾಪರ ಯುಗದ ಮಹಾನ್ ಪುರುಷರಾದ ಶ್ರೀಕೃಷ್ಣನ ಆಶಾಕಿರಣ ಮತ್ತು ಮನೋಭಾವನೆಯನ್ನು ಪಾಲಿಸಿದರೆ, ಪ್ರತಿಯೊಬ್ಬರೂ ಯಶಸ್ಸಿನ ಹೆಜ್ಜೆ ಗುರುತನ್ನು ಕಾಣಬಹುದು. ಭೂಮಿ ಮೇಲೆ ಜನಿಸಿ ಸಾಧನೆಗೈದ ಮಹಾತ್ಮರ ಸವಿನೆನಪಿಗಾಗಿ ಹಾಗೂ ಪ್ರತಿ ಸಮುದಾಯದ ಏಳಿಗೆಗಾಗಿ ಘನ ಸರ್ಕಾರವು ಎಲ್ಲ ಮಹನೀಯರ ಜಯಂತಿ ಆಚರಿಸಲಾಗುತ್ತಿದ್ದು, ನಾವೆಲ್ಲರೂ ಸಾಧಕರ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಅಧರ್ಮ ವಿರುದ್ಧ ನ್ಯಾಯದ ಜಯ ಸಾಧಿಸಲು ಶ್ರೀ ಕೃಷ್ಣ ಪರಮಾತ್ಮನು ಜನಿಸಿದ್ದು, ಧರ್ಮದ ಉಳಿವಿಗಾಗಿ ಶ್ರಮಿಸಿದರು ಎಂದು ತಿಳಿಸಿದರು, ಭಗವದ್ಗೀತೆಯಲ್ಲಿ ಜೀವನದ ಸಾರಾಂಶ ಅಡಗಿದ್ದು, ಅವುಗಳನ್ನು ಭಕ್ತಿ ಭಾವನೆಯಿಂದ ಅನುಸರಿಸಿ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಎಡಿಸಿ ಎನ್. ಮಹಮ್ಮದ್ ಝುಬೇರ್ , ಉಪನ್ಯಾಸಕ‌ ಅಮಾತಿ ಬಸವರಾಜ ಮಾತನಾಡಿದರು.,
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕೃಷ್ಣ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಶ್ರೀಕೃಷ್ಣನ ಮೂರ್ತಿಯೊಂದಿಗೆ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಿಂದ ಆರಂಭಗೊಂಡು ವಿವಿಧ ಕಲಾ ತಂಡಗಳ ವಾದ್ಯಗಳೊಂದಿಗೆ ಗಡಿಗಿ ಚೆನ್ನಪ್ಪ ವೃತ್ತ, ಸ್ಟೇಷನ್ ರಸ್ತೆ, ಹೆಚ್.ಆರ್.ಗವಿಯಪ್ಪ ವೃತ್ತದ ಮುಖಾಂತರ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೆ ಸಾಗಿ ಬಂದು ಸಂಪನ್ನಗೊಂಡಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net