ಕೃಷ್ಣನ ನಾಡಲ್ಲಿ ಕಾವೇರಿದ ಕದನ

Election Udupi
Published on
ಶ್ರೀಕೃಷ್ಣನ ನಾಡು ಉಡುಪಿಯಲ್ಲಿ ಕಾಂಗ್ರೆಸ್​ಗೆ ಅಸ್ಥಿರತೆ ಕಾಡುತ್ತಿದೆ. ಆಸ್ಕರ ಫರ್ನಾಂಡಿಸ್ ನಿಧನಾನಂತರ ಜಿಲ್ಲಾ ಕಾಂಗ್ರೆಸ್ ನಾಯಕರಿಲ್ಲದ ಮನೆಯಂತಾಗಿದೆ. ಪಠ್ಯಪುಸ್ತಕದಲ್ಲಿ ನಾರಾಯಣಗುರು ಕಡೆಗಣನೆ, ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಶಕ್ತಿಯುತವಾಗಿ ಧ್ವನಿ ಎತ್ತುವಲ್ಲಿ ಪ್ರಯತ್ನ ಮಾಡದಿರುವುದು ಪಕ್ಷಕ್ಕೆ ಗಮನಾರ್ಹ ಹಿನ್ನಡೆ. ಇದು ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಲು ಪರೋಕ್ಷ ಕಾರಣ. ಬಿಜೆಪಿ ಹಿಂದು ಅಜೆಂಡಾ ಮೂಲಕ ಬಿಗಿಹಿಡಿತ ಸಾಧಿಸಿದೆ. ಅಜಾನ್, ಲವ್ ಜಿಹಾದ್, ಹಿಜಾಬ್ ತೀರ್ಪಿನ ನಂತರ ಮುಸ್ಲಿಂ ಸಂಘಟನೆ ನಡೆಸಿದ ಬಂದ್, ಗೋಹತ್ಯೆ, ಗೋವು ಕಳವು ಘಟನೆಗಳನ್ನೇ ಹೈಲೈಟ್ ಮಾಡಿ ಬಿಜೆಪಿ ಮತ ಬ್ಯಾಂಕ್ ಭದ್ರಪಡಿಸಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿಯೂ ಹಿಂದುತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ನಿರಾಯಾಸ ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಲಿದೆ ಅಂದರೆ ತಪ್ಪಾಗದು. ಒಟ್ಟಾರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಸ್ತ್ರ ತ್ಯಾಗಮಾಡಿದ್ದು, ಬಿಜೆಪಿಗೆ ಅನುಕೂಲವಾಗಿ ಪರಿಣಮಿಸಿದೆ.

| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಬೈಂದೂರಲ್ಲಿ ಶೆಟ್ರೋ, ಪೂಜಾರಿಯೋ?

ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಆಪ್ತರಲ್ಲಿ ಗುರುತಿಸಿಕೊಂಡ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಕಾಂಗ್ರೆಸ್​ನಿಂದ ಗೋಪಾಲ ಪೂಜಾರಿಯೋ, ಉದ್ಯಮಿ ಯು.ಬಿ.ಶೆಟ್ಟರೋ ಎಂಬ ಅನುಮಾನ ಬಗೆಹರಿದಿಲ್ಲ. ಡಿಕೆಶಿ ಆಪ್ತ ಯು.ಬಿ.ಶೆಟ್ಟಿ ಟಿಕೆಟ್ ಆಕಾಂಕ್ಷಿ. ಗೋಪಾಲ ಪೂಜಾರಿಗೆ ಟಿಕೆಟ್ ನೀಡದಿದ್ದರೆ ಬಿಲ್ಲವ ಸಮುದಾಯ ಮುನಿಸಿಕೊಳ್ಳಬಹುದು. ಹಿಂದೆ ಪೂಜಾರಿ ಸೋತರೂ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದವರು. ಟಿಕೆಟ್ ನೀಡದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಉಭಯಸಂಕಟಕ್ಕೆ ಕಾಂಗ್ರೆಸ್ ಸಲುಕಿದೆ. ಯು.ಬಿ.ಶೆಟ್ಟಿ ಟಿಕೆಟ್ ಪಡೆದರೆ, ಈ ಕ್ಷೇತ್ರದಲ್ಲಿ ಬಂಟರ ನಡುವೆ ಫೈಟ್ ರಂಗೇರಲಿದೆ. ಬೈಂದೂರಿನಲ್ಲಿ ಬಿಲ್ಲವರ ಒಲವು ಬಿಜೆಪಿ ಕಡೆಗಿದೆ. ಸುಕುಮಾರ್ ಶೆಟ್ಟಿ ಕ್ಷೇತ್ರದಲ್ಲಿ ಕೆಲಸ ಮಾಡಿರುವುದರಿಂದ ಗೆಲುವು ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಹಾಲಾಡಿ ಗೆಲುವಿಗೆ ಲಗಾಮು ಕಷ್ಟ...

ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಸ್ವಪಕ್ಷೀಯರ ವಿರೋಧವಿದ್ದರೂ ಗೆಲುವಿನ ಅಂತರ ಕುಗ್ಗಲೇ ಇಲ್ಲ. ಪಕ್ಷ, ಹಿಂದುತ್ವ, ಜಾತಿ ರಾಜಕಾರಣ ಇಲ್ಲದೆ ಸ್ವಂತ ವರ್ಚಸ್ಸಿನಿಂದ ಗೆಲ್ಲುವ ತಾಕತ್ತು ಇರುವ ನಾಯಕ ಹಾಲಾಡಿ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗರಿಷ್ಠ ಮತ ಪಡೆದ ಪೂರ್ವ ನಿದರ್ಶನವೂ ಇದೆ. ಬಿಜೆಪಿಯಿಂದ ಹಾಲಾಡಿಗೆ ಟಿಕೆಟ್ ಗ್ಯಾರಂಟಿ. ಹಾಲಾಡಿ ನಿರಾಕರಿಸಿದರೆ, ಅವರು ಸೂಚಿಸಿದವರಿಗೆ ಪಕ್ಷದ ಟಿಕೆಟ್ ಪಕ್ಕಾ. ಕಿರಣ್ ಕೊಡ್ಗಿಗೆ ಬಿಜೆಪಿ ಟಿಕೆಟ್ ಕೊಟ್ಟರೆ, ಇಬ್ಬರು ಬ್ರಾಹ್ಮಣರಿಗೆ (ಉಡುಪಿಯಲ್ಲಿ ರಘುಪತಿ ಭಟ್)ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ ನೀಡುತ್ತಾ ಎಂಬ ಪ್ರಶ್ನೆ ಎದುರಾಗುತ್ತದೆ. ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋತ ರಾಕೇಶ್ ಮಲ್ಲಿ ಮತ್ತೆ ಅಖಾಡಕ್ಕಿಳಿಯುತ್ತಾರೆಯೇ ಎನ್ನುವುದು ಖಚಿತವಾಗಿಲ್ಲ. ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿಯಾದರೂ ಅಚ್ಚರಿಯಲ್ಲ. ಅಭ್ಯರ್ಥಿ ಯಾರೇ ಆದರೂ ಹಾಲಾಡಿ ಗೆಲುವಿಗೆ ಲಗಾಮು ಹಾಕೋದು ಕಷ್ಟ.

ಕಾರ್ಕಳದಲ್ಲಿ ಸುನೀಲ್ ವರ್ಚಸ್ಸು

ಸಚಿವ ಸುನೀಲ್ ಕುಮಾರ್ ಬೇರೆ ಕ್ಷೇತ್ರಕ್ಕೆ ವಲಸೆ ಹೋಗುತ್ತಾರೆ ಎನ್ನುವ ಊಹಾಪೋಹವಿದ್ದರೂ, ಅವರ ಸ್ಥಾನ ಕಾರ್ಕಳ ಕ್ಷೇತ್ರದಲ್ಲಿ ಭದ್ರವಾಗಿಯೇ ಇದೆ. ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಮಂಜುನಾಥ ಪೂಜಾರಿಯೋ? ರಾಜು ಪೂಜಾರಿಯೋ? ಅನ್ನುವ ಚಿತ್ರಣ ಸ್ಪಷ್ಟವಾಗಿಲ್ಲ. ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ ನಿಧನ, ವರ್ಚಸ್ವಿ ನಾಯಕ ಮುನಿಯಾಲ ಉದಯ ಕುಮಾರ್ ಶೆಟ್ಟಿ ಪಕ್ಷ ತೊರೆದಿದ್ದು, ಬೆಂಬಲಿಗರು ಬಿಜೆಪಿ ಸೇರಿದ್ದರಿಂದ ಕೇಸರಿ ಪಕ್ಷದ ಬೇರು ಗಟ್ಟಿಯಾಗಿದೆ. ಸುನೀಲ್​ಗೆ ಸಚಿವಗಿರಿ ಬಂದ ಬಳಿಕ ಕ್ಷೇತ್ರದಲ್ಲಿ ವರ್ಚಸ್ಸು ಹೆಚ್ಚಿಸಿ ಕೊಂಡಿದ್ದಾರೆ. ಸುನೀಲ್ ವಲಸೆ ಹೋದರೆ ಬಿಜೆಪಿ ಯಾರನ್ನು ಅಖಾಡಕ್ಕಿಳಿಸುತ್ತದೆ ಎನ್ನೋದು ಪ್ರಶ್ನೆ.

ಕಾಂಗ್ರೆಸ್​ಗೆ ಹಿನ್ನಡೆ ಏಕೆ?

ಆಸ್ಕರ್ ಫನಾಂಡಿಸ್ ಇದ್ದಾಗ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್​ಗೆ ನಾಯಕತ್ವ ಇತ್ತು. ಇದೀಗ ಆಸ್ಕರ್, ಎಚ್.ಗೋಪಾಲ ಭಂಡಾರಿ ನಿಧನ, ಪ್ರಮೋದ್ ಮಧ್ವರಾಜ್ ಪಕ್ಷಾಂತರ, ಕಾರ್ಕಳ ಮುನಿಯಾಲು ಉದಯ ಕುಮಾರ್ ಶೆಟ್ಟಿ ಕಾಂಗ್ರೆಸ್ ಪಕ್ಷದಿಂದ ದೂರ ಸರಿದುದು, ಮತ್ತೊಬ್ಬ ಫ್ರಂಟ್​ಲೈನ್ ನಾಯಕ್ ಕೆ.ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರಿದ್ದು, ವಿಧಾನ ಪರಿಷತ್ ಮಾಜಿ ಸ್ಪೀಕರ್ ಪ್ರತಾಪಚಂದ್ರ ಶೆಟ್ಟಿ ರಾಜಕೀಯ ನಿವೃತ್ತಿ ಮುಂತಾದ ಸಂಗತಿಗಳು ಕಾಂಗ್ರೆಸ್​ಗೆ ಸ್ಥಳೀಯ ಮಾರ್ಗದರ್ಶಕರ ಕೊರತೆಗೆ ಕಾರಣವಾಗಿದೆ.

ಕಾಪುವಿನಲ್ಲಿ ಲಾಲಾಜಿ ಸೊರಕೆ

ಶುದ್ಧಹಸ್ತದ ಶಾಸಕ ಲಾಲಾಜಿ ಮೆಂಡನ್​ಗೆ ಸರಳತೆಯೇ ಬಂಡವಾಳ. ನಿರಂತರ ಕ್ಷೇತ್ರದ ಜನರೊಂದಿಗಿರುವುದು ಪ್ಲಸ್ ಪಾಯಿಂಟ್. ಕಾಪು ಕ್ಷೇತ್ರದಲ್ಲಿ ಹಾಲಾಡಿ ಪ್ರಭಾವವೂ ಸಾಕಷ್ಟಿರುವುದು ಮೆಂಡನ್​ಗೆ ವರ. ಮೂರನೇ ಬಾರಿ ಲಾಲಾಜಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ ಟಕ್ಕರ್ ಕೊಡಲು ಸಜ್ಜಾಗುತ್ತಿದ್ದಾರೆ. ಕ್ಷೇತ್ರದ ಮತದಾರರೊಂದಿಗೆ ಸಂಪರ್ಕ ಉಳಿಸಿಕೊಂಡಿರುವ ಸೊರಕೆ ಒಮ್ಮೆ ಸೋಲಿನ ರುಚಿ ಕಂಡವರು. ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್​ಗೆ ಬಲ. ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಸಾಕಷ್ಟಿದೆ. ಅವರು ಉಲ್ಟಾ ಹೊಡೆದರೆ ಲಾಲಾಜಿ ಕೊರಳಿಗೆ ಜಯಮಾಲೆ ಸುಲಭವಲ್ಲ. ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರಿಗೂ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಭಟ್ರಿಗೆ ಅವಕಾಶ ಹೆಚ್ಚು

ಉಡುಪಿಯಲ್ಲಿ ಹುಟ್ಟಿಕೊಂಡ ಹಿಜಾಬ್ ವಿವಾದ ಶಾಸಕ ಕೆ.ರಘುಪತಿ ಭಟ್ ಸ್ಥಾನವನ್ನು ಭದ್ರಪಡಿಸಿದೆ. ಕೈ ಬಿಟ್ಟು ಕಮಲ ಹಿಡಿದ ಪ್ರಮೋದ್ ಮಧ್ವರಾಜ್ ಬೆಂಬಲವಿರುವ ಕಾರಣ, ಭಟ್ರು ಮೂರನೇ ಬಾರಿ ಶಾಸಕರಾದರೂ ಅಚ್ಚರಿಯಲ್ಲ. ಕಾಂಗ್ರೆಸ್ ಪಕ್ಷದಿಂದ ರಮೇಶ್ ಕಾಂಚನ್, ಪ್ರಸಾದ್ ಕಾಂಚನ್, ಕೃಷ್ಣಮೂರ್ತಿ ಅಚಾರ್ಯ ಉಮೇದವಾರಿಕೆ ಅರ್ಜಿ ಹಿಡಿದುಕೊಂಡಿದ್ದರೂ, ಹಿಂದುತ್ವದ ಅಲೆ ಹೆಚ್ಚೇ ಇರುವುದರಿಂದ ಬಿಜೆಪಿಗೆ ಇಲ್ಲಿ ಅವಕಾಶಗಳೇ ಜಾಸ್ತಿ. ಮರಳು ಸಮಸ್ಯೆ ಬಗೆಹರಿಸುವಲ್ಲಿ ಭಟ್ ಮುಂಚೂಣಿಯಲ್ಲಿದ್ದವರು. ಹಿಜಾಬ್ ಘಟನೆಯನ್ನು ಶಾಸಕ ಭಟ್ ಸಮರ್ಥವಾಗಿ ಬಳಸಿಕೊಂಡಿರುವುದು ಹಿಂದು ಮತದಾರರ ಪ್ರೀತಿಗೆ ಕಾರಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net