

ಆನೇಕಲ್: ಕೃಷ್ಣದೊಡ್ಡಿ ಗ್ರಾಮ ಹೊರವಲಯದ ಗುಟ್ಟದಲ್ಲಿ ಮೂರು ಚಿರತೆ ಮರಿ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮದ ವ್ಯಕ್ತಿಯೊಬ್ಬ ಗುಟ್ಟದಲ್ಲಿ ಮರಿಗಳು ಓಡಾಡುತ್ತಿದ್ದುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ನೋಡಿದಾಗ ಅದೂ ಹುಲಿ ಮರಿಗಳು ಎಂದು ತಿಳಿದು ಜನ ಆತಂಕಗೊಂಡು ಸ್ಥಳೀಯ ಪೊಲೀಸರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಶಂಖಿನಮಠ, ವಲಯ ಅರಣ್ಯಾಧಿಕಾರಿ ಗಣೇಶ್ ಭೇಟಿ ನೀಡಿ ಡ್ರೋನ್ ಕ್ಯಾಮರಾ ಮೂಲಕ ಪರಿಶೀಲಿಸಿದಾಗ ಪೊದೆಯಲ್ಲಿ ಮೂರು ಚಿರತೆ ಮರಿಗಳು ಕಂಡುಬಂದಿದೆ.
ಪೊದೆಯಲ್ಲಿ ಮೂರು ಮರಿಗಳು ಮಲಗಿದ್ದು, ತಾಯಿ ಚಿರತೆ ಬೇರೆ ಕಡೆ ಹೋಗಿರಬಹುದು ಎಂಬುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಗ್ರಾಮಸ್ಥರಿಗೆ ಆ ಗುಟ್ಟದ ಕಡೆ ಯಾರು ಹೋಗಬಾರದು, ಹಾಗೆ ರಾತ್ರಿ ವೇಳೆ ಸಂಚರಿಸುವುದುನ್ನು ಕೆಲ ದಿನ ನಿಲ್ಲಿಸಿ ಎಂದು ಸಲಹೆ ನೀಡಿದ್ದಾರೆ.
ಆನೆಗಳ ರೀತಿಯಲ್ಲಿ ಚಿರತೆಗಳನ್ನು ಕಾಡಿನತ್ತ ಓಡಿಸಲು ಸಾಧ್ಯವಾಗುವುದಿಲ್ಲ, ಹಾಗಾಗಿ ತಾಯಿ ಚಿರತೆಯೇ ತನ್ನ ಮರಿಗಳನ್ನು ಕರೆದುಕೊಂಡು ಹೋಗುತ್ತದೆ, ಅಲ್ಲಿವರೆಗೂ ಮರಿಗಳತ್ತ ಹೋಗದಂತೆ ನಿಗಾವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಶಂಖಿನಮಠ ತಿಳಿಸಿದರು.