

ಬೀದರ್: ಕೃಷ್ಣ ಕೊಳ್ಳದ ನೀರು ಬೀದರ್ ಜಿಲ್ಲೆಗೆ ತರಲು ಬಜೆಟ್ ನಲ್ಲಿ ಯೋಜನೆ ರೂಪಿಸಿ ಅನುದಾನ ಒದಗಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದ ಅವರು, ಬಸವಣ್ಣನವರ ಐಕ್ಯಭೂಮಿ ಹಾಗೂ ಕರ್ಮಭೂಮಿಯನ್ನು ಜೋಡಿಸುವ ಮಹತ್ವದ ಯೋಜನೆಗೆ ಸರ್ಕಾರ ಮುಂದಾಗಿ ಈ ಭಾಗದ ಜನರ ಬದುಕು ಹಸನು ಮಾಡಬೇಕೆಂದು ಗಮನ ಸೆಳೆದಿದ್ದಾರೆ.
ಭೀಮಾ ನದಿಗೆ ಅಡ್ಡಲಾಗಿ ಸನ್ನತಿ ಹತ್ತಿರ ನಿರ್ಮಿಸಲಾದ ಅಣೆಕಟ್ಟೆಯಲ್ಲಿ ಲಭ್ಯವಾಗುವ 10 ಟಿಎಂಸಿ ಅಡಿ ಹಿನ್ನೀರು ಬಳಸಿಕೊಂಡು ಏತ ನೀರಾವರಿ, ಕಾರಂಜಾ ಸೇರಿದಂತೆ ಈ ಭಾಗದ ಜಲಾಶಯಗಳು ಹಾಗೂ 47 ಕೆರೆಗಳನ್ನು ತುಂಬುವ ಯೋಜನೆ ರೂಪಿಸಬೇಕಿದೆ. ಇದರಿಂದ ಬೀದರ್ ಹಾಗೂ ಕಲಬುರಗಿ ಜಿಲ್ಲೆಯ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಕಲಬುರಗಿ ನಗರಕ್ಕೆ ಕುಡಿವ ನೀರು ಸರಬರಾಜು ಮಾಡುವ ಯೋಜನೆಗೆ ರೂ. 7,000 ಕೋಟಿ ಅನುದಾನ ಕಲ್ಪಿಸಲೂ ಕೋರಿದ್ದಾರೆ.
ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಇದ್ದರು.