

ಚಿತ್ರದುರ್ಗ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಯಾದವ ಸಮುದಾಯದಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಹೊಳಲ್ಕೆರೆ ರಸ್ತೆಯ ಕೃಷ್ಣ ವೃತ್ತದಿಂದ ಆರಂಭವಾದ ರ್ಯಾಲಿಗೆ ಶ್ರೀಕೃಷ್ಣಯಾದವಾನಂದ ಸ್ವಾಮೀಜಿ ಚಾಲನೆ ನೀಡಿದರು. ನಂತರ ಕನಕ, ಮಹಾತ್ಮಗಾಂಧಿ, ಎಸ್‌ಬಿಐ, ಡಾ.ಬಿ.ಆರ್.ಅಂಬೇಡ್ಕರ್, ಮದಕರಿನಾಯಕ ವೃತ್ತ ಸೇರಿ ಪ್ರಮುಖ ಮಾರ್ಗಗಳಲ್ಲಿ ಸಾಗಿತು. ಇದೇ ವೇಳೆ ಜೈ ಮಾಧವ, ಜೈ ಯಾದವ ಎಂಬ ಘೋಷಣೆಗಳು ಮೊಳಗಿದವು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಅಧ್ಯಕ್ಷ ಕದರಪ್ಪ, ಮುಖಂಡರಾದ ನಾಗರಾಜ್, ಹರೀಶ್, ಜಗದೀಶ್, ಆನಂದಪ್ಪ, ಸಂಪತ್, ಸೀನಪ್ಪ, ಗೋವಿಂದ, ಲೋಕೇಶ್ ಇತರರಿದ್ದರು.