

ಹಾಸನ: ನಗರದ ಚನ್ನಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರ್ಸರಿ (ಎಲ್‌ಕೆಜಿ ಮತ್ತು ಯುಕೆಜಿ) ತರಗತಿಗಳು ಪ್ರಾರಂಭವಾಗಿದ್ದು, ಕೃಷ್ಣ ಜನಾಷ್ಟಮಿ ಪ್ರಯುಕ್ತ ಶನಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮಿಕೊಳ್ಳಲಾಗಿತ್ತು.
ಪ್ರಭಾರ ಮುಖ್ಯಶಿಕ್ಷಕ ಕೆ.ಎಂ.ಹರೀಶ್ ಅವರು ಮಾತನಾಡಿ, ಶ್ರೀಕೃಷ್ಣ ಜನಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳು ಕೃಷ್ಣ, ರಾಧೆ ವೇಷ ಧರಿಸಿ ಹಾಡಿಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷರು ಹಾಗು ಪದಾಧಿಕಾರಿಗಳ ಸಹಕಾರದಲ್ಲಿ ಶಾಲೆ ಮುನ್ನಡೆಯುತ್ತಿದೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ.ಪಾಂಡು ಅವರು ಭೇಟಿ ನೀಡಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸಲು ಪ್ರತ್ಯೇಕ ಕೊಠಡಿ ನಿರ್ಮಿಸಲು ಸೂಚಿಸಿದ್ದಾರೆ.
ಈಗಾಗಲೇ ಅದರ ಕಾಮಗಾರಿ ಪ್ರಗತಿಯಲ್ಲಿದ್ದು, ಶೌಚಾಲಯದ ಯುಜಿಡಿ ಪೈಪ್‌ಲೈನ್ ಅನ್ನು ಸರಿಪಡಿಸಲು ದಾನಿಗಳು ಅದಕ್ಕೆ ಬೇಕಾದ ಸಲಕರಣೆ ನೀಡಿದ್ದಾರೆ. ಸರ್ಕಾರಿ ಶಾಲೆಯೊಂದು ತನಗೆ ಸಿಗುವ ಅತ್ಯಲ್ಪ ಸಂಪನೂಲವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ವಿನಯಕುಮಾರಿ ಅವರು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆ. ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಇಂತಹ ವೇದಿಕೆಗಳು ನೆರವಾಗುತ್ತವೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ಸಹ ಶಿಕ್ಷಕರಾದ ಎಚ್.ಎಂ.ಗೀತಾ, ಎಲ್.ರುಕಿಣಿ, ಗಿರಿಜಮ, ಭಾರತಿ, ರಕ್ಷಾ, ಅನುಪಮ, ಶೋಭಾ, ಪೂಜಾ, ಮಧುರ ಇತರರಿದ್ದರು.