

ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿರುವ ಪರಿಣಾಮ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ಮಂಗಳವಾರ ನೀರಿನ ಪ್ರಮಾಣ ಹೆಚ್ಚಾಗಿದೆ.
ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ೬೨ ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಡ್ಯಾಂನಿಂದ ೭೧೧೨೦ ಕ್ಯೂಸೆಕ್ ಹೊರಹರಿವು ಇದೆ. ಹೀಗಾಗಿ ೬ ಟಿಎಂಸಿ ನೀರಿನ ಜಲಾಶಯದಲ್ಲಿ ಮಂಗಳವಾರ ೨.೩೬ ನೀರು ಸಂಗ್ರಹ ಇದೆ. ಎರಡ್ಮೂರು ದಿನಗಳಿಂದ ಹೆಚ್ಚಿನ ನೀರು ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಮಾಡಿದ್ದಾರೆ. ಕಾರಣ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಇದ್ದು, ಕಲ್ಲೋಳ ಬ್ಯಾರೇಜ್ ನಿಂದ ಇನ್ನೂ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇರುವುದರಿಂದ ಮುಂಜಾಗೃತ ಕ್ರಮವಾಗಿ ಹಿಪ್ಪರಗಿ ಜಲಾಶಯದಿಂದ ಹೆಚ್ಚಿನ ನೀರು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.
ಇನ್ನು ಬೆಳೆಗಾವಿಯಲ್ಲೂ ಸಹ ಮಳೆ ಅಬ್ಬರದಿಂದಾಗಿ ಘಟಪ್ರಭಾ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಮಂಗಳವಾರ ನದಿಗೆ ೭ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮುಧೋಳ ಹೊರವಲಯದ ಘಟಪ್ರಭಾ ಕಿರುಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದೆ. ತುಂಬಿ ಹರಿಯುವ ಕಿರುಸೇತುವೆ ಮೇಲೆ ಯುವಕನೊಬ್ಬ ಅತ್ತಿತ್ತ ಸಂಚರಿಸುತ್ತ ಹುಚ್ಚಾಟ ನಡೆಸಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ನದಿಗಳು ಅಪಾಯಮಟ್ಟದಲ್ಲಿ ಹರಿಯುವ ವೇಳೆ ಯುವಕರು ಓಡಾಡುವುದು ಅಪಾಯಕ್ಕೆ ಆವ್ಹಾನ ಎನ್ನುವ ಎಚ್ಚರಿಕೆ ತಿಳಿದು ತಿಳಿದು ಈ ರೀತಿ ನಡೆದುಕೊಳ್ಳುತ್ತಿರುವುದು ಒಳ್ಳೆಯದಲ್ಲ ಎನ್ನುವ ಮಾತುಗಳು ಕೇಳಿ ಬಂದವು.