

ಆಲ್ದೂರು: ಕೆಳಗೂರು ಗ್ರಾಮದಲ್ಲಿ ಸೋಮವಾರ ಕೃಷಿಹೊಂಡಕ್ಕೆ ಕೂಲಿ ಕಾರ್ಮಿಕರ 11 ವರ್ಷದ ಮಗಳು ಬಿದ್ದು ಮೃತಪಟ್ಟಿದ್ದು ಮಂಗಳವಾರ ಬೆಳಕಿಗೆ ಬಂದಿದೆ.
ಕೆಳಗೂರು ಗ್ರಾಮದ ರವಿ ಅವರ ಮನೆ ಸಮೀಪ ಕಾರ್ಮಿಕರು ನರ್ಸರಿ ಗಿಡಗಳನ್ನು ನೆಡಲು ಬುಟ್ಟಿಗಳನ್ನು ತುಂಬುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಾನಗಲ್‌ನಿಂದ ಕೂಲಿ ಅರಸಿ ಕಾರ್ಮಿಕ ಕುಟುಂಬವೊಂದು ಮೂರು ಮಕ್ಕಳ ಜತೆ ಇಲ್ಲಿಗೆ ಬಂದಿದ್ದು ಕೆಲವು ತಿಂಗಳಿಂದ ಇಲ್ಲಿಯೇ ವಾಸವಿದ್ದರು. ನರ್ಸರಿ ಗಿಡಗಳಿಗೆ ಬುಟ್ಟಿ ತುಂಬುವ ಸಂದರ್ಭದಲ್ಲಿ ಇವರ ಮಕ್ಕಳು ಆಟವಾಡುತ್ತ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಕ್ಕಳನ್ನು ಮನೆಗೆ ಹೋಗುವಂತೆ ಪಾಲಕರು ಕಳುಹಿಸಿದ್ದಾರೆ.
ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪಾಲಕರಿಗೆ ಮೂರು ಮಕ್ಕಳಲ್ಲಿ ಮಗಳು ಕಾಣದೆ ಇದ್ದಾಗ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ರಸ್ತೆ ಸಮೀಪವೇ ನರ್ಸರಿ ಇದ್ದು ಅಂಗಡಿ ಸೇರಿದಂತೆ ಸುತ್ತಮುತ್ತ ಹುಡುಕಾಡಿದ್ದು ಪತ್ತೆಯಾಗದೆ ಆತಂಕದಲ್ಲೇ ದಿನ ಕಳೆದಿದ್ದಾರೆ. ಮಂಗಳವಾರ ಬೆಳಗ್ಗೆ ಕಾರ್ಮಿಕರು ನರ್ಸರಿ ಗಿಡಗಳಿಗೆ ನೀರು ಹಾಕಲು ಕೃಷಿ ಹೊಂಡಕ್ಕೆ ಹೋದಾಗ ಕಷಿಹೊಂಡದಲ್ಲಿ ಬಾಲಕಿಯ ಮೃತದೇಹ ತೇಲುತ್ತಿದ್ದದ್ದು ಕಂಡು ಪಾಲಕರಿಗೆ ವಿಷಯ ತಿಳಿಸಿದ್ದಾರೆ.
ಸೋಮವಾರ ನರ್ಸರಿ ಕೆಲಸ ಪೂರ್ಣಗೊಳಿಸಿ ಮಂಗಳವಾರ ಊರಿಗೆ ತೆರಳಬೇಕಿದ್ದ ಕಾರ್ಮಿಕ ಕುಟುಂಬ ಮಗಳ ಮೃತದೇಹದ ಜತೆ ಊರಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಲಕರ ಆಕಂದ್ರನ ಮುಗಿಲು ಮುಟ್ಟಿತ್ತು. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.