ಕೃಷಿಯಲ್ಲಿ ಸಾವಯವ ಗೊಬ್ಬರ ಬಳಸಿ

23_
Published on

ಮಹೋತ್ಸವದಲ್ಲಿ ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್​.ಅಶೋಕ್​ ಸಲಹೆ

ಪಟ್ಟನಾಯಕನಹಳ್ಳಿ: ಮಠಗಳು ರಾಜಕೀಯ ಕೇಂದ್ರ ಆಗಬಾರದು. ಅನ್ನದಾಸೋಹ, ವಿದ್ಯೆ, ಧರ್ಮ ಬೆಳೆಸುವ ಹಾಗೂ ದೇಶಕ್ಕೆ ಅನ್ನ ನೀಡುವ ರೈತನ ಬೆನ್ನೆಲುಬಾಗಿರಬೇಕು. ಅಂತಹ ಮಹತ್ಕಾರ್ಯವನ್ನು ಶ್ರೀ ನಂಜಾವಧೂತ ಸ್ವಾಮೀಜಿ ಮಾಡುತ್ತಿದ್ದಾರೆ

ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ಹೇಳಿದರು.

ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದೇಶನ ವೇದಿಕೆಯಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಣ್ಣಿನ ಮಹತ್ವ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಮತ್ತು ಸಮಗ್ರ ಕೃಷಿ ಪದ್ಧತಿಗಳ ಕುರಿತ ವಿಚಾರ ಸಂಕೀರಣ ಹಾಗೂ ರೈತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸ್ವಾಮೀಜಿಗಳು ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಏರ್ಪಡಿಸಿ ಅನ್ನದಾತರಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ರೈತರು ಕೃಷಿಯಲ್ಲಿ ಸಾವಯವ ಗೊಬ್ಬರ ಬಳಿಸಿ ಅತಿ ಹೆಚ್ಚು ಇಳುವರಿ ಪಡೆಯುವ ವೈಜ್ಞಾನಿಕ ರೀತಿಯನ್ನು ಅಳವಡಿಸಿಕೊಳ್ಳಬೇಕು. ಈ ಹಿಂದೆ ನಾವುಗಳು ಸಾವಯವ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದೆವು. ಆದರೆ ಕೃಷಿ ವಿಜ್ಞಾನಿಗಳು ಇಳುವರಿ ಹೆಚ್ಚು ಮಾಡುವ ಉದ್ದೇಶದಿಂದ ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುವ ಪದ್ಧತಿ ಜಾರಿಗೆ ತಂದರು. ಆದರೆ ಈಗ ಮತ್ತೆ ರಾಸಾಯನಿಕ ಬೆಳೆಸಬಾರದೆಂದು ಹೇಳುತ್ತಿದ್ದಾರೆ ಎಂದರು.

ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಂಜಾವದೂತ ಸ್ವಾಮೀಜಿ ಮಾತನಾಡಿ, ರೈತರು ಕೃಷಿಯಲ್ಲಿ ಉತ್ಸಾಹ ಹಾಗೂ ನಂಬಿಕೆ ಕಳೆದುಕೊಳ್ಳುವ ರೀತಿ ನೋಡಿದಾಗ ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ಆಹಾರಕ್ಕಾಗಿ ಸ್ವಾವಲಂಬಿಗಳಾಗಿ ಬದುಕುತ್ತಿರುವ ನಾವುಗಳು ಬೇರೊಬ್ಬರ ಹತ್ತಿರ ಭಿೆ ಬೇಡುವ ಪರಿಸ್ತಿತಿ ಉಂಟಾಗುತ್ತದೆ. ಕೃಷಿ ಒಂದು ಉದ್ಯಮವಾಗಿ ಬೆಳೆಯಬೇಕು. ಅದರಲ್ಲೂ

ಲಾಭ ಸಿಕ್ಕರೆ ಮಾತ್ರ ರೈತರಲ್ಲಿ ಉತ್ಸಾಹ ನಂಬಿಕೆ ಮೂಡಿಸಬಹುದು ಎಂದು ತಿಳಿಸಿದರು.

ವಿದೇಶದಿಂದ ರೇಷ್ಮೆ ಆಮದು ನಿಲ್ಲಿಸಿ ನಮ್ಮ ದೇಶದಲ್ಲಿ ಬೆಳೆಯುವ ರೇಷ್ಮೆಗೆ ಪ್ರೋತ್ಸಾಹ ನೀಡಬೇಕೆಂಬ ಕೇಂದ್ರ ಸರ್ಕಾರದ ತೀರ್ಮಾನದಿಂದ 60ರಿಂದ 70 ರೂ.ಗಳಿದ್ದ ರೇಷ್ಮೆ ಬೆಲೆ ಈಗ 800 ರೂ.ಗಳಿಗೆ ಏರಿಕೆಯಾಗಿದೆ. ಈ ರೀತಿ ಕೃಷಿಯೂ ಸಹ ಉದ್ದಿಮೆಯಾಗಿ ಬೆಳೆಯಬೇಕು ಎಂದರು. ಕುಣಿಗಲ್​ ಶಾಸಕ ಡಾ. ರಂಗನಾಥ್​ ಮಾತನಾಡಿ, ರೈತರು ಹಾಗೂ ಬಡವರ ಏಳಿಗೆಗಾಗಿ ಗ್ಯಾರಂಟಿ ಜಾರಿ ಮಾಡಲಾಗಿದೆ. ಯಾವ ಕಾರಣಕ್ಕೂ ಎಷ್ಟೇ ವಿರೋಧ ಕೇಳಿ ಬಂದರೂ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್​ ಸದಸ್ಯ ಚಿದಾನಂದ್​ ಎಂ.ಗೌಡ, ಜಿಕೆವಿಕೆ ಉಪಕುಲಪತಿ ಡಾ.ಸುರೇಶ್​, ಕೃಷಿ ವಿಜ್ಞಾನಿಗಳಾದ ಡಾ.ಎಂ.ಎ.ಶಂಕರ್​, ಡಾ.ಎಂ.ಟಿ.ಸಂಜಯ್​, ನೇಗಿಲ ಯೋಗಿ ಸೇವಾ ಟೆಸ್ಟ್​ ಅಧ್ಯಕ್ಷ ಮುನಿರತ್ನಪ್ಪ, ಸಹಾಯಕ ಕೃಷಿ ನಿರ್ದೇಶಕ ಡಾ.ನಾಗರಾಜ್​, ಕೃಷಿ ಅಧಿಕಾರಿಗಳಾದ ಸತ್ಯನಾರಾಯಣ, ಕೆ.ನಟರಾಜ್​, ಮನೋಹರ್​, ರುಕ್ಮಿಣಿ, ತಾಲೂಕು ಬಿಜೆಪಿ ಅಧ್ಯಕ್ಷ ಚಿಕ್ಕಣ್ಣ, ಶಿವಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net