ಕೃಷಿಯಲ್ಲಿ ವೈಜ್ಞಾನಿಕತೆ, ತಾಂತ್ರಿಕತೆ ಅಳವಡಿಸಿಕೊಳ್ಳಿ

13hbd1
Published on

ಹಳೇಬೀಡು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಸಲ್ ಬಿಮಾ, ವಿದ್ಯಾಸಿರಿ ಹಾಗೂ ರೈತಶಕ್ತಿ ಯೋಜನೆಗಳ ಸದುಪಯೋಗವನ್ನು ರಾಜ್ಯದ ಎಲ್ಲ ರೈತರು ಪಡೆದುಕೊಳ್ಳಬೇಕು ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸಮೀಪದ ಪುಷ್ಪಗಿರಿ ಮಠದ ಆವರಣದಲ್ಲಿ ಶುಕ್ರವಾರ ಪುಷ್ಪಗಿರಿ ಸಾವಯವ ಕೃಷಿ ಸಂಘದ ದಶಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ಕೃಷಿಮೇಳ ಉದ್ಘಾಟಿಸಿ ಮಾತನಾಡಿದ ಅವರು, ಅನ್ನದಾತನಿಗೆ ಕೃತಜ್ಞತೆ ಸಲ್ಲಿಸುವುದಾದರೆ ನಾವು ಜೈ ಕಿಸಾನ್ ಎಂಬ ವಾಕ್ಯದೊಂದಿಗೆ ದೂರವಾಣಿ ಕರೆಗಳನ್ನು ಸ್ವೀಕರಿಸುವಂತಾಗಬೇಕು. ಕೃಷಿಯನ್ನು ರೈತರು ಲಾಭದಾಯಕ ಉದ್ಯಮವೆಂದು ಪರಿಗಣಿಸಿ ಬೆಳೆ ಬೆಳೆಯುವ ವಿಧಾನಗಳಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ರೈತರ ಮಕ್ಕಳಿಗೆ ಅನುಕೂಲ ಕಲ್ಪಿಸಲು ಕೃಷಿ ವಿಜ್ಞಾನದಲ್ಲಿ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ 4,500 ಸೀಟುಗಳನ್ನು ನಿಗದಿ ಮಾಡಲಾಗಿದೆ. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಪ್ರಧಾನಮಂತ್ರಿ ಕೃಷಿ ಯೋಜನೆಯಡಿ 10,000 ರೂ.ವರೆಗೂ ಪ್ರೋತ್ಸಾಹಧನ ದೊರೆಯಲಿದೆ ಎಂದು ಹೇಳಿದರು.
ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಆಹಾರ ನೀಡಿ ಹಸಿವನ್ನು ನೀಗಿಸುವ ಅನ್ನದಾತ ಎಂತಹ ಪರಿಸ್ಥಿತಿಯಲ್ಲೂ ಧೃತಿಗೆಡಬಾರದು. ನಿಷ್ಠೆ ಹಾಗೂ ನಂಬಿಕೆಯಿಂದ ಕಾಯಕ ಮಾಡಿದರೆ ಭೂತಾಯಿ ಸಲಹುತ್ತಾಳೆ. ಜತೆಗೆ ನೆಮ್ಮದಿಯ ಜೀವನವೂ ದೊರಕುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೃಷಿ ವಿಜ್ಞಾನಿ ಡಾ.ಎಂ.ವಿ.ಧನಂಜಯ ಮಾತನಾಡಿ, ಸಿರಿಧಾನ್ಯಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವ ಮೂಲಕ ಪುಷ್ಪಗಿರಿ ಶ್ರೀಗಳು ಎಲ್ಲರಿಗೂ ಮಾದರಿಯಾಗಿದ್ದಾರೆ. ಹವಾಮಾನ ಮುನ್ಸೂಚನೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ರೈತರು ಬೆಳೆ ಮಾಡುವ ವಿಧಾನವನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿಮೇಳದಲ್ಲಿ 35ಕ್ಕೂ ಹೆಚ್ಚು ಬಗೆಯ ಯಂತ್ರೋಪಕರಣಗಳನ್ನು ರೈತರು ಪ್ರದರ್ಶಿಸಿದರು. ತಾವು ಬೆಳೆದಿದ್ದ ವಿಶಿಷ್ಟ ಬಗೆಯ ದವಸ ಧಾನ್ಯಗಳ ಬಗ್ಗೆ ಮಾಹಿತಿ ವಿನಿಮಯಕೊಂಡರು.
ಶಾಸಕ ಕೆ.ಎಸ್.ಲಿಂಗೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೀಶ್ ಗಿರೀಶ್, ತಾಲೂಕು ಪಂಚಾಯಿತಿ ಇಒ ಸುನೀತಾ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್, ಮುಖಂಡ ಕೊರಟಿಗೆರೆ ಪ್ರಕಾಶ್, ರೈತ ಮುಖಂಡ ಶಿವಪ್ಪ, ಬಸವರಾಜು, ಕಿಟ್ಟಪ್ಪ, ನಿರಂಜನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net