ಕೃಷಿಯಲ್ಲಿ ಮೊದಲು ಮಣ್ಣಿಗೆ ಆದ್ಯತೆ ನೀಡಿ

nrp krushi
ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಅಡಕೆ, ಕಾಳುಮೆಣಸು ಹಾಗೂ ಶುಂಠಿ ಬೆಳೆಗಳಲ್ಲಿ ಅಂಕಗಣಿತ ವಿಚಾರ ವಿನಿಮಯ ಕಾರ್ಯಕ್ರಮಕ್ಕೆ ಡಿ.ಎಲ್.ಅಶೋಕ್‌ಕುಮಾರ್ ಚಾಲನೆ ನೀಡಿದರು. ಸಚಿನ್ ಸದಾಶಿವಪ್ಪ ಕಬ್ಬೂರ್, ಬಿ.ಕೆ.ನಾರಾಯಣಸ್ವಾಮಿ, ಪಿ.ಕೆ.ಬಸವರಾಜ್ ಇದ್ದರು.
Published on

ಎನ್.ಆರ್.ಪುರ: ಕೃಷಿಯಲ್ಲಿ ಮೊದಲು ಮಣ್ಣಿಗೆ ಆದ್ಯತೆ ನೀಡಬೇಕು. ಮಣ್ಣು ಮತ್ತು ನೀರಿನ ಉತ್ತಮ ನಿರ್ವಹಣೆಯಿಂದ ಬೆಳೆಗಳ ಹಲವು ರೋಗ ಬಾಧೆಗಳು ದೂರವಾಗುತ್ತವೆ ಎಂದು ಹಾನಗಲ್ ಪ್ರಗತಿಪರ ಕೃಷಿಕ ಸಚಿನ್ ಸದಾಶಿವಪ್ಪ ಕಬ್ಬೂರ್ ಹೇಳಿದರು.

ಕೃಷಿ ಇಲಾಖೆ ಆವರಣದಲ್ಲಿ ಶನಿವಾರ ತಾಲೂಕು ಕೃಷಿಕ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ಅಡಕೆ, ಕಾಳುಮೆಣಸು ಹಾಗೂ ಶುಂಠಿ ಬೆಳೆಗಳಲ್ಲಿ ಅಂಕ ಗಣಿತ ಎಂಬ ವಿಷಯ ಕುರಿತು ಮಾತನಾಡಿ, ಅಡಕೆಗೆ ಹಳದಿ ಎಲೆ ರೋಗ ತಡೆಗೆ ಟರ‌್ರಕೋಡರ್ಮ ಮತ್ತು ಸುಡೋಮೊನಸ್ ಬಳಸಿದರೆ ನಿಯಂತ್ರಣಕ್ಕೆ ಬರುತ್ತದೆ. ಬೋರ್ಡೋ ದ್ರಾವಣ ಸಿಂಪಡಿಸಿದರೂ ಎಲೆ ಚುಕ್ಕಿ ರೋಗ ಕಡಿಮೆಯಾಗದಿದ್ದರೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು ಎಂದರು.

ಮಣ್ಣಿನಲ್ಲಿ ಜಿಂಕ್ ಅಂಶವಿಲ್ಲದಿದ್ದರೆ, ಸೂಕ್ಷ್ಮಾಣು ಅಂಶಗಳ ಕೊರತೆಯಿಂದ ಬೆಳೆಗೆ ರೋಗಗಳು ತಗಲುತ್ತವೆ. ಅಡಕೆ ಗಿಡಗಳನ್ನು 9-9 ಅಂತರದಲ್ಲಿ ನೆಡಬೇಕು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಗಿಡದಿಂದ ಗಿಡಕ್ಕೆ ಅಂತರ ಕಡಿಮೆಯಾದಾಗ ಬೇರುಗಳ ನಡುವೆ ಸ್ಪರ್ಶವಾಗಿ ಬೇರುಗಳು ಬೆಳವಣಿಗೆಯಾಗದಿದ್ದರೆ ಇಳುವರಿ ಬರುವುದಿಲ್ಲ. ಹಾಗಾಗಿ ಮಣ್ಣು ಪರೀಕ್ಷೆ ಮಾಡಿಸಿ ಯಾವುದು ಕೊರತೆಯಿದೆ ಅದನ್ನು ಮಣ್ಣಿಗೆ ನೀಡಬೇಕು ಎಂದು ತಿಳಿಸಿದರು.

ಮಣ್ಣಿನಲ್ಲಿ ರಸಸಾರ 6.5 ಇದ್ದರೆ ಸುಣ್ಣ ಹಾಕಬಾರದು. ಉತ್ತಮ ಇಳುವರಿ ಹೆಚ್ಚು ಆದಾಯ ಬರಬೇಕಾದರೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಗಿಡಕ್ಕೆ ಹೆಚ್ಚು ನೀರು ಪೂರೈಸಿದರೂ ಮೂರು ಇಂಚಿನ ಆಳದವರೆಗೆ ಮಾತ್ರ ನೀರು ತೆಗೆದುಕೊಳ್ಳುತ್ತದೆ ಎಂದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರೋಹಿತ್ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ 12 ಸಾವಿರ ಹೆಕ್ಟೇರ್ ತೋಟಗಾರಿಕಾ ಬೆಳೆಯಿದೆ. ಅಡಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯಿರುವುದರಿಂದ ಎಲ್ಲರೂ ಅಡಕೆ ಬೆಳೆಯುತ್ತಿದ್ದಾರೆ. ಅಡಕೆ ಬೆಳೆ ಜಾಸ್ತಿಯಾದಂತೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ, ಸುಳಿರೋಗ, ನುಸಿಕಾಟದ ರೋಗ ಬಾಧೆಯೂ ಹೆಚ್ಚಾಗುತ್ತದೆ ಎಂದರು.

ರೈತರು ಶಿಾರಸು ಮಾಡಿದ ಗೊಬ್ಬರ, ಕೀಟನಾಶಕಗಳನ್ನ ಬಳಸಬೇಕು. ಮಣ್ಣಿನ ಪರೀಕ್ಷೆ ಮಾಡುವ ಮೂಲಕ ವೈಜ್ಞಾನಿಕವಾಗಿ ಬೆಳೆ ಬೆಳೆಯುವ ಕಡೆ ಗಮನಹರಿಸಬೇಕು. ಶೀಘ್ರದಲ್ಲೇ ತೋಟಗಾರಿಕಾ ಇಲಾಖೆಯಿಂದ ರೈತರಿಗೆ ವಿವಿಧ ಬೆಳೆಗಳ ರೋಗಬಾಧೆ ತಡೆಗಟ್ಟುವ ಬಗ್ಗೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣ ಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್, ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ.ಜಾನಕೀರಾಂ, ಶೃಂಗೇರಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎನ್.ಗೋಪಾಲ್ ಹೆಗ್ಡೆ, ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಮಾಳೂರುದಿಣ್ಣೆ ವಿನಾಯಕ, ಸಹಾಯಕ ಕೃಷಿ ನಿರ್ದೇಶಕ ಮಹೇಶ್, ಪ್ರಸನ್ನ, ಜಿಲ್ಲಾ ಕೃಷಿಕ ಸಮಾಜದ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ, ಅನ್ನಪೂರ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net