

ಸೊರಬ: ನಿಸರ್ಗ ಹೇಗೆ ತನ್ನನ್ನು ತಾನು ಪೋಷಿಸಿಕೊಂಡು ಹೋಗುತ್ತದೋ ಅದೇ ನಿಯಮವನ್ನು ನಮ್ಮ ಕೃಷಿಯಲ್ಲಿ ಅಳವಡಿಸಿಕೊಂಡರೆ ಸ್ವಸ್ಥ, ಸುಸ್ಥಿರ ಕೃಷಿ ಬದುಕು ನಮ್ಮದಾಗುತ್ತದೆ ಎಂದು ದಾವಣಗೆರೆಯ ಸಹಜ ಕೃಷಿಕ ಐಕಾಂತಿಕ ರಾಘವ ಶ್ರೀನಿವಾಸಪುರ ಹೇಳಿದರು.
ತಾಲೂಕಿನ ಯಲಸಿ ಸುವರ್ಣವನದಲ್ಲಿ ಶಿವಮೊಗ್ಗದ ಸಹಜ ಕೃಷಿಕರ ಬಳಗ ಆಯೋಜಿಸಿದ್ದ ಅಂತರ್ ಜಿಲ್ಲಾ ಮಟ್ಟದ ಸಹಜ ಕೃಷಿ ಕಾರ್ಯಾಗಾರದಲ್ಲಿ ವಿಷಮುಕ್ತ ಆಹಾರ ಬೆಳೆಯುವ ವಿಧಾನ, ತೂರು ಬಿತ್ತನೆಯ ಪದ್ಧತಿ ವಿಷಯ ಕುರಿತು ಮಾತನಾಡಿದರು.
ಗಿಡಗಳನ್ನು ನಿಸರ್ಗ ನಿಯಮದಂತೆ ಪ್ರಕೃತಿಯೇ ನೋಡಿಕೊಳ್ಳುತ್ತದೆ. ತೋಟವನ್ನು ಕಾಪಾಡುವುದು ಕೇವಲ ಪ್ರಕೃತಿ. ಇದರಲ್ಲಿ ಮನುಷ್ಯನ ಕ್ರಿಯೆ ಅತ್ಯಲ್ಪ. ವಾತಾವರಣವು ಬೆಳೆಗಳ ರಕ್ಷಣಾ ಕಾರ್ಯ ಹಾಗೂ ಬೆಳವಣಿಗೆಯನ್ನು ಅವಲಂಬಿಸುತ್ತದೆ. ಅದಕ್ಕೆ ಅನುಗುಣವಾಗಿ ರೈತರು ಬೆಳೆ ಬೆಳೆಯಬೇಕು ಎಂದರು.
ಶಿವಮೊಗ್ಗದ ಬಿ.ಎಂ.ಮಲ್ಲಿಕಾರ್ಜುನ್ ಮಾತನಾಡಿ, ವಿಷರಹಿತ ಹಲವು ತರಕಾರಿ, ಧಾನ್ಯಗಳ ಬೀಜಗಳನ್ನು ಪ್ರಸರಿಸುವ ಜತೆಗೆ ಬೀಜ ಸಂರಕ್ಷಿಸುವ ಕಾರ್ಯದಲ್ಲಿ ಕೃಷಿಕರು ಕೈಜೋಡಿಸಬೇಕು ಎಂದರು.
ಕೃಷಿಯಲ್ಲಿ ಜೇನಿನ ಮಹತ್ವ ಕುರಿತು ಗೌತಮ ಪ್ರಾತ್ಯಕ್ಷಿಕೆ ನೀಡಿದರು. ಕೃಷಿಕರಾದ ಪಾಂಡುರಂಗ, ವೀರೇಶ, ಜಬೀವುಲ್ಲಾ, ಹನುಮಂತ, ಔಷೀಯ ಸಸ್ಯಗಳ ಸಂರಕ್ಷಕ ಪ್ರಕಾಶ್, ಬಿ.ಎನ್.ಸಿ.ರಾವ್, ಗಂಗಾಧರ ಗೌಡ, ಕಲಾವಿದ ಶರತ್, ರಜನಿ ಬಿ. ಗೌಡ, ಶ್ರೀಪಾದ, ರಾಜೇಶ್ವರಿ, ವಸುಧಾ, ಗೀತಾ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.