ಕೃಷಿಯಲ್ಲಿ ಡ್ರೋನ್ ಬಳಕೆ ಸಹಕಾರಿ

22222
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕೃಷಿಯಲ್ಲಿ ಸಸ್ಯ ಪೋಷಕಾಂಶ ಸಿಂಪಡಿಸಲು ಅಧಿಕ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಕೃಷಿಡ್ರೋನ್ ಸಿಂಪಡಣೆಗೆ ಬಳಸುವುದರಿಂದ ರೈತರಿಗೆ ಸಹಕಾರಿಯಾಗಲಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಹೇಳಿದರು.
ತಾಲೂಕಿನ ಸೊಣ್ಣಪ್ಪನಹಳ್ಳಿಯಲ್ಲಿ ಶನಿವಾರ ಕೃಷಿ ಇಲಾಖೆಯಿಂದ ಕೃಷಿಯಲ್ಲಿ ಡ್ರೋನ್ ಬಳಕೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.


ಏರುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆ ಜಾರಿಗೊಳಿಸಲಾಗಿದೆ. ಆಹಾರ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿ. ಪ್ರಸ್ತುತ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ದೊಡ್ಡ ಸಮಸ್ಯೆಯಾಗಿದ್ದು, ಡ್ರೋನ್ ಬಳಕೆಯಿಂದಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜೆ.ವೆಂಕಟೇಗೌಡ ಮಾತನಾಡಿ, ಯೂರಿಯಾವನ್ನು ಮೇಲುಗೊಬ್ಬರವಾಗಿ ಬೆಳೆಗಳಿಗೆ ಎರಚುವುದು ಪ್ರಸ್ತುತ ಚಾಲ್ತಿಯಲ್ಲಿರುವ ವಿಧಾನವಾಗಿದೆ. ಈ ವಿಧಾನದಿಂದ ಯೂರಿಯಾ ಹರಳುಗಳು ಸಸ್ಯಗಳ ಬೇರುಗಳಿಗೆ ಸೂಕ್ತವಾಗಿ ದೊರೆಯುವುದಿಲ್ಲ. ವಾತವಾರಣದಲ್ಲಿ ತಾಪಮಾನ ಹೆಚ್ಚಾದಂತೆ ಯೂರಿಯಾದಲ್ಲಿನ ಪೋಷಕಾಂಶವು ಆವಿಯಾಗಬಹುದು. ಹೆಚ್ಚಿನ ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ನ್ಯಾನೋ ಯೂರಿಯಾ ಸಿಂಪಡಣೆಯು ಯೋಗ್ಯ ಮಾರ್ಗವಾಗಿದೆ. ನ್ಯಾನೋ ಯೂರಿಯಾದ ಸೂಕ್ಷ್ಮ ಕಣಗಳು ಹೆಚ್ಚಿನ ಸುತ್ತಳತೆ ಹೊಂದಿದ್ದು, ಎಲೆಗಳ ಮೇಲೆ ಸಿಂಪಡಣೆ ಮಾಡಿದಾಗ ಶೀಘ್ರವಾಗಿ ಎಲೆಗಳಲ್ಲಿನ ಸೂಕ್ಷ್ಮರಂಧ್ರಗಳ
ಮೂಲಕ ಸಸ್ಯದ ಶರೀರದೊಳಗೆ ಸೇರಿ ಪೋಷಕಾಂಶಗಳು ನ್ಯಾಯೋಚಿತವಾಗಿ ಸಸ್ಯದ ಬೆಳವಣಿಗೆಗೆ ದೊರೆಯುವಂತೆ ಮಾಡುತ್ತವೆ. ರೈತರು ಈ ತಂತ್ರಜ್ಞಾನ ಬಳಸಿಕೊಂಡು ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.

ನ್ಯಾನೋ ಯೂರಿಯಾ ಬಳಕೆಯಿಂದ ರೈತರ ಖರ್ಚು ಕಡಿಮೆಯಾಗುವುದಲ್ಲದೆ ರೈತರು ಹೆಚ್ಚಿನ ಆದಾಯ ಪಡೆಯಬಹುದು. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಯನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡುವುದರ ಮೂಲಕ ರೈತರು ಕೃಷಿ ಕಾರ್ಮಿಕರ ಕೊರತೆ ನೀಗಿಸಬಹುದು.ಚೇತನ್ ಇಫ್ಕೋ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net