

ಹನೂರು: ಕೃಷಿ ಇಲಾಖೆಯಿಂದ ದೊರಕುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯುವುದರ ಮೂಲಕ ಅರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಆರ್.ನರೇಂದ್ರ ಸಲಹೆ ನೀಡಿದರು.
ತಾಲೂಕಿನ ಕೌದಳ್ಳಿ ಗ್ರಾಮದ ಅರಣ್ಯ ಇಲಾಖೆಯ ಅತಿಥಿಗೃಹದ ಅವರಣದಲ್ಲಿ ಬುಧವಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಫಲಾನುಭವಿಗಳಿಗೆ ಕೃಷಿ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಕೃಷಿಯಲ್ಲಿ ನಿಯಮಿತ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಹೆಚ್ಚುವರಿ ಇಳುವರಿ ಪಡೆಯುವ ವಿಧಾನವನ್ನು ಉತ್ತೇಜಿಸುವ ಸಲುವಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೃಷಿ ಭೂಮಿಯನ್ನು ನೀರಾವರಿ ವ್ಯವಸ್ಥೆಗೆ ಒಳಪಡುವಂತೆ ಮಾಡುವುದು ಹಾಗೂ ಕೃಷಿಯಲ್ಲಿ ನೀರಾವರಿ ತಗಲುವ ವೆಚ್ಚವನ್ನು ಕನಿಷ್ಟಗೊಳಿಸುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಜತೆಗೆ ಕೃಷಿಗೆ ಪೂರಕವಾದ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ ಎಂದರು.
ಯೋಜನೆಗೆ ತಾಲೂಕಿನ ಕೌದಳ್ಳಿ, ಕುರಟ್ಟಿ ಹೊಸೂರು, ಅಜ್ಜೀಪುರ, ಶೆಟ್ಟಳ್ಳಿ ಹಾಗೂ ದೊಡ್ಡಲತ್ತೂರು ಗ್ರಾಮಗಳು ಆಯ್ಕೆಯಾಗಿದ್ದು, ಆರ್ಹ ಫಲಾನುಭವಿಗಳಿಗೆ ಕೃಷಿ ಪರಿಕರಗಳನ್ನು ವಿತರಿಸಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಈ ವೇಳೆ 50 ಫಲಾನುಭವಿಗಳಿಗೆ ಜಾನುವಾರು ನೆಲಹಾಸು, 30 ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಒಬ್ಬರಿಗೆ ಜೇನು ಸಾಕಣೆ ಪೆಟ್ಟಿಗೆಯನ್ನು ವಿತರಿಸಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದರಮ್ಮ, ಕೃಷಿ ಅಧಿಕಾರಿಗಳಾದ ರಘುವೀರ್, ವೆಂಕಟನಾಯಕ, ಮುಖಂಡರಾದ ಮೆಹಬೂಬ್, ರಾಜಣ್ಣ ಇನ್ನಿತರರು ಇದ್ದರು.