ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅನುಸರಿ

19arsph1ep
Published on

ಅರಸೀಕೆರೆ: ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಲು ರೈತರು ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ಭಾನುಪ್ರಕಾಶ್ ಹೇಳಿದರು.


ಕೃಷಿ ಇಲಾಖೆ ಹಾಗೂ ರಸಗೊಬ್ಬರ ಮಾರಾಟಗಾರರ ವತಿಯಿಂದ ತಾಲೂಕಿನ ಜಾವಗಲ್ ಹೋಬಳಿ ಮಲದೇವಿಹಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ನ್ಯಾನೋ ಯೂರಿಯಾವನ್ನು ಡ್ರೋನ್ ಮೂಲಕ ಸಿಂಪಡಿಸುವ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದರು.


ಯೂರಿಯಾ ರಸಗೊಬ್ಬರವನ್ನು ಹರಳು ರೂಪದಲ್ಲಿ ಭೂಮಿಗೆ ಹಾಕುವುದರಿಂದ ಶೇ.35ರಿಂದ 40 ರಷ್ಟು ಮಾತ್ರವೇ ಸಾರಜನಕ ಬೆಳೆಗೆ ದೊರೆಯುತ್ತದೆ. ಆದರೆ ದ್ರವರೂಪದ ನ್ಯಾನೋ ಯೂರಿಯಾ ದ್ರಾವಣ ಸಿಂಪಡಿಸುವುದರಿಂದ ಪ್ರಯೋಜನದ ಪ್ರಮಾಣ ಶೇ.75ರಿಂದ 80 ರಷ್ಟು ಲಭಿಸಲಿದೆ. ಜತೆಗೆ ಸಮೃದ್ಧ ಫಸಲಿನ ನಿರೀಕ್ಷೆ ಮಾಡಬಹುದಾಗಿದೆ. ಪ್ರತಿ ಎಕರೆಗೆ ಅರ್ಧ ಲೀ ನ್ಯಾನೋ ಯೂರಿಯಾ ದ್ರಾವಣ ಮಾತ್ರ ಬಳಕೆ ಮಾಡಬಹುದಾಗಿದ್ದು, ಪರಿಸರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಎಂದು ಮಾಹಿತಿ ನೀಡಿದರು.


ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಶಿವಕುಮಾರ್ ಮಾತನಾಡಿ, ಸೇನಾ ನೆರವಿಗೆ ಧಾವಿಸುತ್ತಿದ್ದ ಡ್ರೋನ್ ಬಳಕೆ ಇದೀಗ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಬೇಸಾಯದ ಖರ್ಚು ಕಡಿಮೆ ಮಾಡಲು ಹಾಗೂ ಕೃಷಿ ಕ್ಷೇತ್ರಕ್ಕೆ ಹೊಸ ಬಗೆಯ ತಂತ್ರಜ್ಞಾನದ ಬಳಕೆ ಅಗತ್ಯವಿದೆ ಎಂಬುದನ್ನು ಮನದಟ್ಟು ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಕೃಷಿ ಇಲಾಖೆ ವತಿಯಿಂದ ತುಂತುರು ನೀರಾವರಿ ಘಟಕ, ಬಿತ್ತನೆ ಬೀಜ, ಯಂತ್ರೋಪಕರಣ ಸೇರಿ ಹಲವು ಕೃಷಿ ಪರಿಕರಗಳನ್ನು ನೀಡಲಾಗುತ್ತಿದೆ. ರೈತರು ಸಮೀಪದ ರೈತ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಡಾ.ನಾಗರಾಜ್, ಕಾರೇಕೆರೆ ಕೃಷಿ ಕಾಲೇಜಿನ ಡಾ.ಚನ್ನಕೇಶವ, ಬೋರನಕೊಪ್ಪಲು ಕೃಷಿ ಸಂಶೋಧನಾ ಕ್ಷೇತ್ರದ ಡಾ.ಸೋಮಶೇಖರ್ ಆಧುನಿಕ ಬೇಸಾಯ ಹಾಗೂ ಆರ್ಥಿಕ ಸ್ವಾವಲಂಬನೆ ಕುರಿತು ಮಾತನಾಡಿದರು.


ಕೃಷಿ ಅಧಿಕಾರಿ ಸುಬ್ರಮಣ್ಯ, ಎಎಒ ಕಟ್ಟೀಮನಿ, ಕೃಷಿ ಪರಿಕರ ಮಾರಾಟಗಾರರಾದ ಜಾವಗಲ್ ಅನಿಲ್‌ಕುಮಾರ್, ಲೋಕೇಶ್, ನೇರ‌್ಲಿಗೆ ಗ್ರಾಪಂ ಅಧ್ಯಕ್ಷ ಶಿವಕುಮಾರಸ್ವಾಮಿ, ಸಂಕೀಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜೇಶ್, ತಾಪಂ ಮಾಜಿ ಸದಸ್ಯ ನೇರ‌್ಲಿಗೆ ಸೋಮಶೇಖರ್, ಕಲ್ಲಳ್ಳಿ ನಾಗರಾಜ್ ಗ್ರಾಮಸ್ಥರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net