ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅವಶ್ಯ

BIDAR-1
 ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ೧೭೬ನೇ ತಿಂಗಳ ಅನುಭವ ಮಂಟಪ ಹಾಗೂ ಡಾ.ಫ.ಗು.ಹಳಕಟ್ಟಿಯವರು ಜಯಂತಿಯನ್ನು ಕೃಷಿ ವಿಜ್ಞಾನಿ ರವಿ ದೇಶಮುಖ ಉದ್ಘಾಟಿಸಿದರು. ಶ್ರೀ ನಿರಂಜನ ಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ, ಪ್ರೊ.ಎಸ್.ಬಿ. ಬಿರಾದಾರ, ಗೋಪಿಚಂದ ತಾಂದಳೆ ಇತರರಿದ್ದರು.
Published on

ಬೀದರ್: ದೇಶದ ಪ್ರಗತಿ ಆಗಬೇಕಾದರೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಅವಶ್ಯಕತೆಯಿದೆ ಎಂದು  ಬೀದರ್‌ನ ಕೃಷಿ ವಿಜ್ಞಾನಿ ರವಿ ದೇಶಮುಖ ಹೇಳಿದರು.

ನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ೧೭೬ನೇ ತಿಂಗಳ ಅನುಭವ ಮಂಟಪ ಹಾಗೂ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿಯವರು ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರೈತನ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಲ್ಯಾಣ ಯೋಜನೆಗಳನ್ನು ಸರ್ಕಾರ ಕಾರ್ಯರೂಪಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಬಸವಾದಿ ಶರಣರು ಕೃಷಿಕೃತ್ಯ ಕಾಯಕಕ್ಕೆ ಮಹತ್ವ ನೀಡಿದ್ದಾರೆ. ಅಂದು ವಿವಿಧ ರೀತಿಯ ಕಾಯಕಕ್ಕೆ ಮಹತ್ವ ನೀಡಿದ್ದಾರೆ. ರೈತ ದೇಶದ ಬೆನ್ನೆಲುಬು ಎಂದು ಹೇಳುವುದರಲ್ಲಿ ಕೇವಲ ಮಾತಿನಲ್ಲಿದೆ. ಪ್ರಸ್ತುತ ರೈತನ ಪರಿಸ್ಥಿತಿ ತೀರಾ ಚಿಂತಜನಕವಾಗಿದೆ. ಗಡಿಯಲ್ಲಿ ಯೋಧರು ಪ್ರಮಾಣಿಕತೆಯಿಂದ ಕರ್ತವ್ಯ ಬದ್ಧರಾಗಿದ್ದಾರೆ ಹಾಗೆ ರೈತರು ಸಹ ಮಳೆ-ಬಿಸಿಲು ಎನ್ನದೆ ಭೂಮಿಯಲ್ಲಿ ಉತ್ತಿ ಬಿತ್ತಿ ಬಂದ ಫಲವನ್ನು ಗುರು-ಲಿಂಗ-ಜಂಗಮಕ್ಕೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಸಮಾಜಕ್ಕೆ ಬಹುದೊಡ್ಡದ್ದು ಎಂದರು.

ಅನುಭವ ಮಂಟಪದ ಪ್ರವಚನಕಾರ ಶ್ರೀ ನಿರಂಜನ ಸ್ವಾಮೀಜಿ ಅನುಭಾವ ನೀಡಿ, ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಭೇದ-ಭಾವ ಮಾಡದೆ ತ್ಯಾಗ ಮನೋಭಾವದಿಂದ ಮನುಕುಲ ಉದ್ಧಾರಕ್ಕಾಗಿ ನಡೆ-ನುಡಿ ಒಂದಾಗಿಸಿಕೊಂಡು ವಚನಗಳ ಮೂಲಕ ಜಗತ್ತಿಗೆ ಶ್ರೇಷ್ಠ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಶರಣರು ರಚಿಸಿದ ಮೌಲಿಕ ವಚನಗಳನ್ನು ಡಾ.ಫ.ಗು.ಹಳಕಟ್ಟಿ ಅವರು ಸಂರಕ್ಷಿಸಿದ್ದಾರೆ. ತಮ್ಮ ಮನೆ, ಆಸ್ತಿ ಮತ್ತು ಇದ್ದ ಮಗನನ್ನು ಕಳೆದುಕೊಂಡು ವಚನ ಸಾಹಿತ್ಯಕ್ಕಾಗಿ ಇಡೀ ಜೀವನ ಸಮರ್ಪಿಸಿದ್ದಾರೆ. ವಚನಗಳ ತಾಡೋಲೆಗಳನ್ನು ಸಂಗ್ರಹಿಸಿ ಸುಮಾರು ೧೦ ಸಾವಿರ ವಚನಗಳನ್ನು ಸಂಗ್ರಹಿಸಿ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿ ವಚನಗಳನ್ನು ಮುದ್ರಿಸಿದ್ದಾರೆ. ಶಿವಾನುಭವ ಮಾಸ ಪತ್ರಿಕೆ ಹೊರ ತಂದು ವಚನ ಸಾಹಿತ್ಯದ ಸೇವೆ ಮಾಡಿದ್ದಾರೆ. ಬಿಎಲ್‌ಡಿ ಶಿಕ್ಷಣ ಸಂಸ್ಥೆ ಮತ್ತು ಸಿದ್ಧೇಶ್ವರ ಬ್ಯಾಂಕ್ ಸ್ಥಾಪಿಸಿ ಸಮಾಜಕ್ಕಾಗಿ ನಿಶ್ವಾರ್ಥ ಸೇವೆ ಮಾಡಿದ್ದಾರೆ ಎಂದು ಬಣ್ಣಿಸಿದರು.

ಶ್ರೀ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ನವ್ಯ ವಿ. ಪ್ರಸಾದದ ಕುರಿತು ವಚನ ಚಿಂತನೆ ನೀಡಿದರು. ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ.ಎಸ್.ಬಿ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪ ಬಿರಾದಾರ, ಸಂಗ್ರಾಮ ಎಂಗಳೆ, ಸಿದ್ದಯ್ಯ ಕೌಡಿಮಠ, ಗುರುನಾಥ ಬಿರಾದಾರ, ನಾಗಶೆಟ್ಟಿ ಜೊತೆಪ್ಪನೋರ, ಆರ್.ಎಸ್.ಬಿರಾದಾರ, ಮಲ್ಲಿಕಾರ್ಜುನ ಹುಡಗೆ, ಲಕ್ಷ್ಮೀಬಾಯಿ ಮಾಳಗೆ, ಮೀನಾಕ್ಷಿ ಪಾಟೀಲ, ಲಕ್ಷ್ಮೀ ಬಿರಾದಾರ, ಡಾ.ವೈಜಿನಾಥ ಬಿರಾದಾರ, ಮಹಾದೇವಿ ಬಿರಾದಾರ, ಶಕುಂತಲಾ ಮಲ್ಕಪನೋರ, ಕಸ್ತೂರಿಬಾಯಿ ಬಿರಾದಾರ, ಮಾಲಾಶ್ರೀ ಗುರುನಾಥ, ಮಹಾನಂದಾ ಸ್ವಾಮಿ, ಶಶಿಕಲಾ, ಪ್ರೇಮಾ ಮುಚಳಂಬೆ, ಸವಿತಾ ಗಂದಿಗುಡೆ ಇತರರಿದ್ದರು.

ದಾಸೋಹಿ ಪ್ರೊ.ಭಾಗೀರಥಿ ಶಾಮರಾವ ಕೊಂಡಾ ಬಸವ ಗುರುವಿನ ಪೂಜೆ ನೆರವೇರಿಸಿ ಸ್ವಾಗತಿಸಿದರು. ಪ್ರೊ.ಉಮಾಕಾಂತ ಮೀಸೆ ಸನ್ಮಾನಿತರನ್ನು ಪರಿಚಯಿಸಿದರು. ಭಾಗ್ಯಶ್ರೀ ಸಂಜುಕುಮಾರ ವಂದಿಸಿದರು. ರೇವಣಪ್ಪ ಮುಲಗೆ ನಿರೂಪಣೆ ಮಾಡಿದರು. ಚನ್ನಬಸಪ್ಪ ನವಬಾಧೆ ಮತ್ತು ಶ್ರೀನಿವಾಸ ಪಾಪಡೆ, ಶಂಭುಲಿಂಗ ವಾಲದೊಡ್ಡಿ ವಚನ ಸಂಗೀತ ನಡೆಸಿಕೊಟ್ಟರು. ಅಕ್ಕಮಹಾದೇವಿ ಮಹಿಳಾ ಸಂಸ್ಕೃತಿಕ ಸಂಘದಿಂದ ಗುರು ಬಸವ ಪ್ರಾರ್ಥನೆ ಮತ್ತು ಭಜನೆ ನಡೆಯಿತು. ಪತ್ರಕರ್ತ ಶಶಿಕಾಂತ ಎಸ್.ಶೆಂಬೆಳ್ಳಿ ಹಾಗೂ ಹಿರಿಯ ಪತ್ರಿಕಾ ಛಾಯಾಗ್ರಹಕ ಗೋಪಿಚಂದ ತಾಂದಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಸವಣ್ಣನವರು ಹೇಳುವಂತೆ ಅಂತರಂಗ ಬಹಿರಂಗದಿಂದ ಶ್ರೀಮಂತರಾಗಿರಬೇಕು. ಅಂತಹ ಶ್ರೀಮಂತಿಕೆ ಹಳಕಟ್ಟಿ ಅವರದ್ದಾಗಿತ್ತು. ಸುಮಾರು ೨೫೦ ಶರಣರ ಪರಿಚಯ ಸಮಾಜಕ್ಕೆ ಮಾಡಿಕೊಟ್ಟಿದ್ದಾರೆ. ಬಿ.ಎಂ.ಶ್ರೀ ಅವರು ಹೇಳುವಂತೆ ಫ.ಗು.ಹಳಕಟ್ಟಿ ಅವರು ವಚನ ಗುಮ್ಮಟರಾಗಿದ್ದಾರೆ. ವಚನ ಸಾಹಿತ್ಯಕ್ಕಾಗಿ ಜೀವನ ಮೀಸಲಾಗಿಟ್ಟಿದ್ದರು. ಅವರು ವಚನಗಳ ಬೆಳಕನ್ನು ಮನುಕೂಲಕ್ಕೆ ಕೊಟ್ಟಂತಹ ಮಹಾ ಬೆಳಕು.

| ಶ್ರೀ ನಿರಂಜನ ಸ್ವಾಮೀಜಿ ಪ್ರವಚನಕಾರರು

ಬಸವಾದಿ ಶರಣರ ವಚನಗಳಲ್ಲಿ ಜೀವನ ಮೌಲ್ಯಗಳು ಅಡಗಿವೆ. ವಚನನಗಳನ್ನು ಅರಿತು ನಿತ್ಯ ಜೀವನದಲ್ಲಿ ಆಚರಣೆಗೆ ತರುವ ಮೂಲಕ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಬದ್ಧರಾಗಿ ಕಾರ್ಯನ್ಮುಖರಾಗೋಣ.

| ಶ್ರೀ ಮಹಾಲಿಂಗ ಸ್ವಾಮೀಜಿ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net