

ಚಾಮರಾಜನಗರ: ಉಳುಮೆ ಮಾಡಲ್ಲ, ರಾಸಾಯನಿಕ ಗೊಬ್ಬರ ಹಾಕಲ್ಲ, ಕಿತ್ತ ಕಳೆಯನ್ನು ಹೊರಗೆ ಎಸೆಯಲ್ಲ..ಈ ರೀತಿ ಇಲ್ಲಗಳ ನಡುವೆಯೇ ಖುಷಿಯಾಗಿ ಕೃಷಿ ಮಾಡುತ್ತಿರುವ ತಾಲೂಕಿನ ರೈತರೊಬ್ಬರಿಗೆ ‘ಗೋನಂದಾಜಲ’ವೇ ಮೂಲ ಬಲ.
ತಾಲೂಕಿನ ಗೋವಿಂದವಾಡಿ(ಕಲ್ಪುರ) ಗ್ರಾಮದ ನಿವಾಸಿ ಜಿ.ಮಹೇಶ್ ವಿಷಮುಕ್ತ ರಸಯುಕ್ತ ಕೃಷಿಯ ಪರಮ ಆಸಕ್ತರು. ಪರಿಣಾಮ ಹಳೇಪುರದಲ್ಲಿರುವ 7 ಎಕರೆ ಜಮೀನಿನಲ್ಲಿ 13 ವರ್ಷಗಳಿಂದ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಸಮೃದ್ಧವಾಗಿರುವ ತೋಟದಲ್ಲಿ 420 ತೆಂಗು, 1300 ಅಡಿಕೆ, 500 ನಂಜನಗೂಡು ರಸಬಾಳೆ, 5-6 ಮಾವು, 1 ಸೇಬಿನ ಹಣ್ಣಿನ ಗಿಡ, 2 ನಲ್ಲಿಕಾಯಿ ಗಿಡ, 3-4 ಸಪೋಟಾ, 10 ತೇಗ, ಪರಂಗಿ ನಳನಳಿಸುತ್ತಿವೆ.
ತೆಂಗಿನಲ್ಲಿ ತೂಗುತ್ತಿರುವ ಎಳನೀರು ಗೊಂಚಲು, ವಯಸ್ಸಿಗೆ ಮೀರಿ ಬೆಳೆದಿರುವ ಅಡಿಕೆ ಗಿಡಗಳು, ನಾಳೆಗಳ ಮೇಲೆ ಭರವಸೆ ಮೂಡಿಸುವಂತಿರುವ ಬಾಳೆ ಗಿಡಗಳು ತೋಟದ ಶ್ರೀಮಂತಿಕೆಗೆ ಸಾಕ್ಷಿಗಳಾಗಿವೆ. ಇವುಗಳಿಗೆಲ್ಲ ಜೀವಜಾಲವಾಗಿರುವುದೇ ಗೋನಂದಾಜಲ. ಗೋ ಆಧಾರಿತ ದ್ರವರೂಪದ ಗೊಬ್ಬರವನ್ನು ಜಿಲ್ಲೆಯಲ್ಲಿ ಬಳಕೆ ಮಾಡುತ್ತಿರುವ ಕೆಲವೇ ಕೆಲವು ರೈತರಲ್ಲಿ ಮಹೇಶ್ ಕೂಡ ಒಬ್ಬರು ಎನ್ನುವುದು ಗಮನಾರ್ಹ.
ಏನಿದು ಗೋನಂದಾಜಲ?:
ಇಟ್ಟರೆ ಸಗಣಿಯಾದೆ, ತಟ್ಟಿದರೆ ಕೊರಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ಎನ್ನುವ ಎಸ್.ಜಿ.ನರಸಿಂಹಾಚಾರ್ ಅವರ ‘ಗೋವಿನ ಹಾಡಿ’ಗೆ ಕೊಳೆಸಿದರೆ ದ್ರವರೂಪದ ಗೊಬ್ಬರವಾದೆ ಎಂದು ಸೇರಿಸಿಕೊಂಡರೆ ಗೋನಂದಾಜಲವಾಗುತ್ತದೆ.
ಅಂದರೆ, ಸಹಜವಾಗಿ ಮೃತಪಟ್ಟ ಕರುವನ್ನು ಕೊಳೆಸಿ ದ್ರವರೂಪದ ಗೊಬ್ಬರವಾಗಿಸುವುದೇ ಗೋನಂದಾಜಲ. ಬೆಳೆಗಳ ಬೆಳವಣಿಗೆಗೆ ಪೂರಕವಾದ ಪೋಷಕಾಂಶಗಳನ್ನು ನೀಡುವ ಗೋನಂದಾಜಲ ತಯಾರಿಕೆಗೆ ನಿರ್ದಿಷ್ಟ ಕ್ರಮವಿದೆ. ರೈತ ಮಹೇಶ್ ಅವರಿಗೆ 1 ವರ್ಷದ ಹಿಂದೆ ಸ್ನೇಹಿತರ ಮನೆಯಲ್ಲಿ ಸತ್ತುಹೋಗಿದ್ದ 3 ತಿಂಗಳ ಕರು ಸಿಕ್ಕಿತ್ತು. 20 ಕೆ.ಜಿ ಇದ್ದ ಕರುವನ್ನು ಡ್ರಮ್‌ನಲ್ಲಿ ಹಾಕಿ ಅದರಷ್ಟೇ ತೂಕದ ಸಾವಯವ ಕರಿಬೆಲ್ಲ, ಸಗಣಿ, ಮಜ್ಜಿಗೆ, ಗೋಮೂತ್ರವನ್ನು ಹಾಕಿ 7 ತಿಂಗಳ ಕಾಲ ಮುಚ್ಚಿ ಕೊಳೆಸಿದರು. ಎಲ್ಲವೂ ಸೇರಿ ಕರಗಿ ಸಿದ್ಧವಾಗುವುದೇ ಗೋನಂದಾಜಲ. ತಯಾರಿಕೆ ಹಂತದಲ್ಲಿ ಸರಿಯಾಗಿ ಮುಚ್ಚಿದರೆ ವಾಸನೆ ಬಾರದು. ಡ್ರಮ್ ತೆಗೆದ ಮೇಲೂ ವಾಸನೆ ಬರುವುದಿಲ್ಲ.
ಗೋನಂದಾಜಲ ಗೋವು ಮರಣಾ ನಂತರವೂ ಉಪಯುಕ್ತ ಎನ್ನುವುದನ್ನು ರೈತನಿಗೆ ಮನವರಿಕೆ ಮಾಡಿಕೊಡುವ ಪ್ರಯೋಗ. ಈ ಪ್ರಯತ್ನದಲ್ಲಿ ರೈತ ಮಹೇಶ್ ಯಶಸ್ವಿಯಾಗಿದ್ದಾರೆ.
15 ದಿನಗಳಿಗೆ ಒಂದು ಸಲ..:
200 ಲೀಟರ್ ನೀರಿಗೆ 3 ಲೀಟರ್ ಗೋನಂದಾಜಲವನ್ನು ಬೆರೆಸುತ್ತಾರೆ. ಜಮೀನಿನಲ್ಲಿ ಎರಡು ಬೋರ್‌ವೆಲ್‌ಗಳಿವೆ. ಹನಿ ನೀರಾವರಿ ಪದ್ಧತಿಯಲ್ಲಿ ಗಿಡಗಳಿಗೆ ನೀರು ಹಾಯಿಸುತ್ತಿದ್ದಾರೆ. ಇದೇ ಪೈಪ್‌ಗಳಲ್ಲಿ 15 ದಿನಗಳಿಗೆ ಒಮ್ಮೆ ಗಿಡಗಳಿಗೆ ಗೋನಂದಾಜಲವನ್ನು ಹಾಯಿಸುತ್ತಿದ್ದಾರೆ. ಲವತ್ತಾದ ಮಣ್ಣು, ಅದರಲ್ಲಿ ಸೂಕ್ಷ್ಮಜೀವಿಗಳ ಉಳಿವು ಎದ್ದು ಕಾಣುತ್ತಿದೆ. ಬಾಳೆ, ತೆಂಗಿನಿಂದ ಬಿದ್ದ ತರಗನ್ನು ನೆಲದಲ್ಲೇ ಬಿಟ್ಟು ಕೊಳೆಸಿ ಗೊಬ್ಬರವಾಗಿ ಪರಿವರ್ತನೆಯಾಗುತ್ತಿರುವ ಮಣ್ಣಿನಲ್ಲಿ ಎರೆಹುಳುಗಳು ಕಾಣಸಿಗುತ್ತಿವೆ. ಮೃದುವಾದ, ಹದವಾದ ನೆಲದ ಮೇಲೆ ಹೆಜ್ಜೆ ಇಟ್ಟರೆ ಸಾಕು ಮಣ್ಣಿನ ಗುಣ ತಿಳಿಯುವಂತಿದೆ.
ರೇಷ್ಮೆ ಕೃಷಿ, ಜೇನು ಸಾಕಾಣೆ:
ರೈತ ಮಹೇಶ್ ಈ ಹಿಂದೆ ರೇಷ್ಮೆ ಕೃಷಿಕರಾಗಿದ್ದರು. ಪ್ರಗತಿ ಪರ ರೈತರಾಗಿ ಹಲವು ವೇದಿಕೆಗಳಲ್ಲಿ ಗೌರವ ಸನ್ಮಾನಗಳನ್ನೂ ಪಡೆದುಕೊಂಡಿದ್ದರು. ಬೆಲೆ ಸಿಗದ ಹಿನ್ನೆಲೆಯಲ್ಲಿ ರೇಷ್ಮೆ ಕೃಷಿಯಿಂದ ವಿಮುಖರಾಗಿ ಪ್ರಯೋಗಶೀಲರಾದರು. ಸಾವಯವ ಪದ್ಧತಿ, ಗೋನಂದಾಜಲದೊಂದಿಗೆ ಜೇನು ಸಾಕಾಣೆಯನ್ನೂ ಸಹ ಮಾಡುತ್ತಿದ್ದರು. ಈಗಲೂ ಸಹ ತೋಟದಲ್ಲಿ 10 ಜೇನು ಪೆಟ್ಟಿಗೆಗಳಿವೆ. ಈ ಹಿಂದೆ ಜೇನು ಸಾಕಾಣೆಗೆ ಕಾಡಿದ್ದ ಕೀಟ ಬಾಧೆಗೆ ಪರಿಹಾರ ಕಂಡುಕೊಂಡು ಮರಳಿ ಜೇನು ಸಾಕಲು ಸಿದ್ಧರಾಗುತ್ತಿದ್ದಾರೆ.
ಕನ್ನೇರಿಶ್ರೀ ಅರಿವೆಂಬ ಗುರು: ರೈತ ಮಹೇಶ್‌ಗೆ ಕೃಷಿಯಲ್ಲಿರುವ ಆಸಕ್ತಿ ಯುವ ರೈತರಿಗೆ ಸ್ಫೂರ್ತಿಯಾಗುವಂತದ್ದು. ಕನ್ನೇರಿ ಮಠದ ಶ್ರೀಗಳಾದ ಕಾಡು ಸಿದ್ದೇಶ್ವರರು ಕೃಷಿ ಬಗ್ಗೆ ಆಡುವ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಮಹೇಶ್ ತನ್ನ ಕೃಷಿಯಲ್ಲಿ ಬದಲಾವಣೆ ತಂದುಕೊಂಡಿದ್ದಾರೆ. ಹೀಗಾಗಿ ಇವರ ಪಾಲಿಗೆ ಕನ್ನೇರಿಶ್ರೀಗಳು ಅರಿವೆಂಬ ಗುರುವಾಗಿದ್ದಾರೆ. ಅಲ್ಲದೇ, ವಿಭಿನ್ನವಾಗಿ, ಹೊಸ ಪ್ರಯೋಗವಾಗಿ, ಅತ್ಯುತ್ತಮವಾಗಿ ಯಾರು, ಎಲ್ಲೇ ಕೃಷಿ ಮಾಡಿದ್ದರೂ ಅಲ್ಲಿಗೆ ಮಹೇಶ್ ಭೇಟಿ ನೀಡಿ ಅಧ್ಯಯನ ಮಾಡುತ್ತಾರೆ. ತನ್ನ ಜಮೀನಿಗೆ ಬರುವ ರೈತರಿಗೂ ಸಲಹೆಗಳನ್ನು ನೀಡುತ್ತಾರೆ. ಇಕ್ರಾ ಸಂಸ್ಥೆಯ ಕಾರ್ಯಕರ್ತ ಶಿವಲಿಂಗೇಗೌಡ ಅವರ ಮಾರ್ಗದರ್ಶ, ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಮಹೇಶ್ ಅವರ ಅನುಭವದ ಜೋಳಿಗೆಯೊಳಗಿದೆ.
ನಾವು ರೂಢಿ ಮಾಡಿದಂತೆ ಭೂಮಿ ಬದಲಾಗುತ್ತದೆ. ರೈತರು ಆಹಾರ ಬೆಳೆದು ಅನ್ನದ ಋಣ ಉಳಿಸುತ್ತಾರೆ. ಜತೆಗೆ ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಿ ಬರಡು ಮಾಡದೆ ತಮ್ಮ ಮಕ್ಕಳಿಗೆ ನೆಲದ ಋಣವನ್ನೂ ಉಳಿಸಬೇಕಿದೆ. ಸಾವಯವ ಕೃಷಿಯಿಂದ ಭವಿಷ್ಯದಲ್ಲಿ ಭೂಮಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕನ್ನೇರಿ ಶ್ರೀಗಳು ತಿಳಿಸಿರುವ ಗೋನಂದಾಜಲವನ್ನು ತಯಾರಿಸಿ ಬೆಳೆಗಳಿಗೆ ನೀಡುತ್ತಿದ್ದೇನೆ. ಜಿ.ಮಹೇಶ್, ಪ್ರಯೋಗಶೀಲ ರೈತ, ಕಲ್ಪುರ