ಕೃಷಿಕರೊಂದಿಗೆ ಅಧಿಕಾರಿಗಳ ಕಣ್ಣಾಮುಚ್ಚಾಲೆ

JUL 28-HRP-01
Published on

ಹರಪನಹಳ್ಳಿ: ಯೂರಿಯಾ ಗೊಬ್ಬರ ಸಮರ್ಪಕರವಾಗಿ ಪೂರೈಸಬೇಕೆಂದು ಆಗ್ರಹಿಸಿ ಪಟ್ಟಣದ ತೆಗ್ಗಿನಮಠದ ಮುಂದೆ ರೈತರು ಸೋಮವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಸತತ ಮಳೆ ಸುರಿಯುತ್ತಿದೆ. ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅಗತ್ಯವಿದೆ. ಆದರೆ, ಅಗತ್ಯ ಪ್ರಮಾಣದಲ್ಲಿ ಸಿಗದ ಪರಿಣಾಮ ತೊಂದರೆ ಎದುರಿಸುವಂತಾಗಿದೆ. ಸೋಮವಾರ ಬೆಳಗ್ಗೆ ಗೊಬ್ಬರ ನೀಡುತ್ತೇವೆಂದು ಹೇಳಿದ್ದಕ್ಕೆ ಬೆಳಗ್ಗೆ 6 ಗಂಟೆಯಿಂದ ಅಂಗಡಿ ಮುಂದೆ ಕಾದು ಕುಳಿತಿದ್ದೇವೆ. ಆದರೆ, ಅಂಗಡಿ ಮಾಲೀಕರು ಅಂಗಡಿ ತೆರೆದು ಗೊಬ್ಬರ ನೀಡದೆ ನಿರ್ಲ್ಯಕ್ಷ ಮಾಡುತ್ತಿದ್ದಾರೆ ಎಂದು ದೂರಿದರು.

ಬೆಳೆಗಳು ಅತಿಯಾದ ಮಳೆಯಿಂದ ರೋಗಬಾಧೆಗೆ ತುತ್ತಾಗುತ್ತಿವೆ. ಆದರೆ, ಅಧಿಕಾರಿಗಳು ಸಮರ್ಪಕವಾಗಿ ಗೊಬ್ಬರ ನೀಡದೆ ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

ನಂತರ ಸ್ಥಳಕ್ಕೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್ ಆಗಮಿಸಿ, 45 ಮೆಟ್ರಿಕ್ ಟನ್ ಗೊಬ್ಬರ ಬಂದಿದ್ದು, ರೈತರು ಸಾಲು ನಿಂತು ಪಡೆಯಬೇಕು. ರೈತರಿಗೆ ಅಗತ್ಯ ಪ್ರಮಾಣದ ಗೊಬ್ಬರ ನೀಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು. ನಂತರ ರೈತರು ಸಾಲು ನಿಂತು ರಸಗೊಬ್ಬರ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net